​ರೈತರ ವಿಶ್ವಾಸಗಳಿಕೆಯಲ್ಲಿ ಕೊರತೆ : ಸಚಿವ ಸುನೀಲ್ ಕುಮಾರ್

Update: 2021-11-19 15:37 GMT

ಉಡುಪಿ, ನ.19: ಕೇಂದ್ರ ಸರಕಾರ ಮುಂಬರುವ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಯಾವುದೇ ನಿರ್ಣಯವನ್ನು ಕೈಗೊಂಡಿಲ್ಲ. ಇಂದು ಪ್ರಧಾನಿ ವಾಪಾಸು ಪಡೆದಿರುವ ಮೂರು ಕೃಷಿ ಕಾಯ್ದೆಯೂ ರೈತರ ಪರ ವಾಗಿಯೇ ಇದ್ದವು. ಆದರೆ ಇವುಗಳನ್ನು ಪರಿಣಾಮಕಾರಿ ತಿಳಿಸುವಲ್ಲಿ ಮತ್ತು ರೈತರ ವಿಶ್ವಾಸಗಳಿಕೆಯಲ್ಲಿ ಕೊರತೆ ಉಂಟಾಗಿದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಪುರಭವನದಲ್ಲಿ ನಡೆದ ಬಿಜೆಪಿ ಜನಸ್ವರಾಜ್ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಸರಕಾರ ರೈತಪರ ಹತ್ತಾರು ಯೋಜನೆಗಳನ್ನು ನೀಡಿದೆ. ಸರಕಾರ ರೈತರ ಪರವಾಗಿರುವ ಕಾರಣಕ್ಕೆ ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕಾಯ್ದೆ ವಾಪಾಸು ಪಡೆದಿದೆ ಎಂದು ಪ್ರಧಾನಿ ನಡೆಯನ್ನು ಸಮರ್ಥಿಸಿಕೊಂಡರು.

ರೈತರ ಮನವೊಲಿಸಿ ಪ್ರಧಾನಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಕಾಂಗ್ರೆಸ್ ಮತ್ತು ಇತರ ಸಂಘಟನೆಗಳು ರೈತರ ದಿಕ್ಕು ತಪ್ಪಿಸುವ ಕಾರ್ಯವನ್ನು ನಿರಂತರ ಮಾಡುತ್ತಿವೆ. ದಲ್ಲಾಳಿಗಳ ಪರ ಯಾರಿದ್ದಾರೆ ಎಂಬುದನ್ನು ಜನರಿಗೆ ತಿಳಿಸುವ ಕಾರ್ಯವನ್ನು ಬಿಜೆಪಿ ಮಾಡಲಿದೆ. ರೈತರ ಹತ್ತಿರ ಹೋಗುವ ಇನ್ನಷ್ಟು ಪ್ರಯತ್ನಗಳನ್ನು ನಾವು ಮಾಡಲಿದ್ದೇವೆ ಎಂದರು.

ಕೃಷಿ ಬಿಲ್‌ಗಳಿಂದ ತೊಂದರೆಯಾಗುತ್ತೋ, ಬಿಲ್ ಇಲ್ಲದೆ ತೊಂದರೆ ಆಗುತ್ತೋ ಎಂಬುದನ್ನು ಅಭಿಯಾನದ ಮೂಲಕ ರೈತರಿಗೆ ಮನವರಿಕೆ ಮಾಡುತ್ತೇವೆ. ಬಿಜೆಪಿ ಸರಕಾರ, ಬಿಜೆಪಿ ನಾಯಕರು ಎಲ್ಲವನ್ನೂ ಮುಕ್ತವಾಗಿ ಸ್ವೀಕರಿಸುತ್ತೇವೆ. ಜನರ ಅಭಿಪ್ರಾಯವನ್ನು ತೆಗೆದುಕೊಂಡು ಕಾಲಕಾಲಕ್ಕೆ ನಿರ್ಣಯಗಳನ್ನು ಬದಲು ಮಾಡಿದ್ದೇವೆ. ಹೊಸ ನಿರ್ಣಯಗಳನ್ನು ಕಾಲಕಾಲಕ್ಕೆ ತೆಗೆದುಕೊಂಡಿದ್ದೇವೆ ಎಂದವರು ಅವರು ವಿವರಿಸಿದರು.

ಕಾಂಗ್ರೆಸ್ ಸುತ್ತಲಿದೆ ಬಿಟ್‌ ಕಾಯಿನ್ ಹಗ್ಗ: ಬಿಟ್ ಕಾಯಿನ್ ಹಗ್ಗ ತೋರಿಸಿ ಹಾವು ಎನ್ನುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ಈ ಹಗ್ಗ ನಿಧಾನವಾಗಿ ಕಾಂಗ್ರೆಸ್‌ನ್ನು ಸುತ್ತಿಕೊಳ್ಳಲಿದೆ. ತನಿಖೆ ಮಾಡುತ್ತೇವೆ. ಯಾವುನ್ನೂ ಮುಚ್ಚಿಡು ವುದಿಲ್ಲ ಎಂದರು.

ಉಡುಪಿ ಮತ್ತು ದ.ಕ. ಜಿಲ್ಲೆಯ ಯಾವುದೇ ಕಾಂಗ್ರೆಸ್ ನಾಯಕರು ಪಕ್ಷಕ್ಕೆ ಸೇರುವ ವಿಚಾರದಲ್ಲಿ ಸಂಪರ್ಕಿಸಿಲ್ಲ. ಅಭಿವೃದ್ಧಿ ಹಾಗೂ ಇತರ ಕೆಲಸಗಳ ಬಗ್ಗೆ ಚರ್ಚಿಸಲು ನೂರಾರು ಮಂದಿ ಭೇಟಿಯಾಗುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತಿಕ್ರಿಯೆಗೆ ಶೋಭಾ ನಕಾರ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಕಾಯ್ದೆಗಳನ್ನು ಪ್ರಧಾನಿ ವಾಪಾಸು ಪಡೆದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಬಿಜೆಪಿಯ ಜನಸ್ವರಾಜ್ ಸಮಾವೇಶದಲ್ಲಿ ಪಾಲ್ಗೊಳ್ಳುವ ಮುನ್ನ ಕೃಷ್ಣ ಮಠದ ಭೇಟಿಗೆ ತೆರಳಿದ ವೇಳೆ ಪ್ರತಿಕ್ರಿಯೆಗಾಗಿ ಮಾಧ್ಯಮದ ಮಂದಿ ಬಂದಿರುವುದನ್ನು ಅರಿತು ಒಂದು ಗಂಟೆಗೂ ಅಧಿಕ ಕಾಲ ಅವರನ್ನು ಕಾಯಿಸಿದರು. ಕೊನೆಗೆ ಹೊರಬಂದು ಪತ್ರಕರ್ತರೊಂದಿಗೆ ಮಾತನಾಡಿದರೂ ಬಿಟ್ ಕಾಯಿನ್, ಕೃಷಿಕರ ಸಮಸ್ಯೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದವರು ಕೃಷಿ ಕಾಯ್ದೆ ವಾಪಾಸು ಪಡೆದ ಬಗ್ಗೆ ಪ್ರಶ್ನೆ ಎತ್ತುತಿದ್ದಂತೆ ಕಾರಿನತ್ತ ದೌಡಾಯಿಸಿ ಕುಳಿತು ಪುರಭವನದತ್ತ ಧಾವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News