ಆಂಧ್ರಪ್ರದೇಶದಲ್ಲಿ ವ್ಯಾಪಕ ಮಳೆಗೆ 17 ಮಂದಿ ನೀರುಪಾಲು; 100ಕ್ಕೂ ಹೆಚ್ಚು ಮಂದಿ ನಾಪತ್ತೆ

Update: 2021-11-20 17:02 GMT

ವಿಜಯವಾಡ, ನ. 20: ಆಂಧ್ರಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕಡಪ ಹಾಗೂ ಅನಂತಪುರದಲ್ಲಿ ಮಳೆ ಸಂಬಂಧಿ ದುರಂತಗಳಲ್ಲಿ ಮತ್ತೆ 4 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಮಳೆ ಸಂಬಂಧಿ ದುರಂತಗಳಲ್ಲಿ ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ‌

ಅನಂತಪುರದ ಕದಿರಿ ಪಟ್ಟಣದಲ್ಲಿ ಎರಡು ಪಕ್ಕಾ ಕಟ್ಟಡಗಳು ಕುಸಿದು ಮೂವರು ಮೃತಪಟ್ಟಿದ್ದಾರೆ. ಕಡಪದ ರಾಜಂಪೇಟ್ ಮಂಡಲ್ನಲ್ಲಿ ಅಣ್ಣಾಮಲೈ ಯೋಜನೆಯ ಮಣ್ಣಿನ ಒಡ್ಡು ಒಡೆದು ಸಂಭವಿಸಿದ ನೆರೆಯಲ್ಲಿ ಕೊಚ್ಚಿ ಹೋದ ಇನ್ನೋರ್ವ ವ್ಯಕ್ತಿಯ ಮೃತದೇಹ ಶನಿವಾರ ಪತ್ತೆಯಾಗಿದೆ. ಕದಿರಿ ಪಟ್ಟಣದಲ್ಲಿ ನವೀಕರಣ ಹಂತದಲ್ಲಿದ್ದ ಮನೆಯೊಂದು ಕುಸಿದಿದೆ. ಅದರ ಅವಶೇಷಗಳು ಸಮೀಪದ ಮನೆಯ ಮೇಲೆ ಬಿದ್ದಿದೆ. ಇದರಿಂದ ಈ ಎರಡು ಮನೆಗಳಲ್ಲಿ ಕನಿಷ್ಠ 15 ಮಂದಿ ಸಿಲುಕಿದ್ದಾರೆ. ಈ ಅವಶೇಷಗಳ ಅಡಿಯಿಂದ ಮೂವರು ಕೂಡಲೇ ಹೊರ ಬಂದಿದ್ದಾರೆ. 

ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿದರು ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದರು. ಅವಶೇಷಗಳ ಅಡಿಯಿಂದ ಸೈದುನ್ನಿಸಾ (3) ಹಾಗೂ ಫರೀದುನ್ನೀಸಾ (2) ಎಂದು ಗುರುತಿಸಲಾದ ಇಬ್ಬರ ಮಕ್ಕಳ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. 2 ಗಂಟೆಗಳ ರಕ್ಷಣಾ ಕಾರ್ಯಾಚರಣೆ ಬಳಿಕ ಪೊಲೀಸರು ಇತರ ಐವರನ್ನು ರಕ್ಷಿಸಿದ್ದಾರೆ. ಇವರಲ್ಲಿ ಫಾತಿಮಾ ಬೀ ಎಂದು ಗುರುತಿಸಲಾದ ಓರ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. 

ಕಡಪದಲ್ಲಿ ಅಣ್ಣಾಮಲೈ ಯೋಜನೆಯಿಂದ ಉಂಟಾದ ನೆರೆಯಲ್ಲಿ ಕೊಚ್ಚಿಕೊಂಡ ಹೋಗಿದ್ದಾರೆಂದು ಭೀತಿಪಡಲಾದ ಕೆಲವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ. ಯೋಜನೆಯ ಮಣ್ಣಿನ ಒಡ್ಡು ಒಡೆದು ಉಂಟಾದ ನೆರೆಯಿಂದ ಕೆಲವು ಗ್ರಾಮಗಳಲ್ಲಿ ನೆರೆ ಉದ್ಭವಿಸಿದೆ. ಈ ನೆರೆಯಲ್ಲಿ 12 ಮಂದಿ ಕೊಚ್ಚಿಕೊಂಡು ಹೋಗಿದ್ದಾರೆ. ಅವರಲ್ಲಿ 8 ಮಂದಿಯ ಮೃತದೇಹ ಪತ್ತೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. 

ರಕ್ಷಣಾ ಕಾರ್ಯಕರ್ತರು ಶನಿವಾರ ರಾಜಂಪೇಟ್ ಮಂಡಲ್ನಲ್ಲಿ ಇನ್ನೊಂದು ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ರಾಯಲಸೀಮೆಯಲ್ಲಿ ಮಳೆ ಸ್ಪಲ್ಪ ಕಡಿಮೆ ಆಗಿದೆ. ಹಲವು ಯೋಜನೆಗಳಲ್ಲಿ ನೀರಿನ ಹೊರ ಹರಿಯುವಿಕೆ ಮುಂದುವರಿದಿದೆ. ತಗ್ಗು ಪ್ರದೇಶಗಳಲ್ಲಿ ನೆರೆ ಸಂಭವಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ನೀಡಲಾಗಿದೆ. ನೆಲ್ಲೂರು ಜಿಲ್ಲೆಯಲ್ಲಿ ವಿವಿಧ ಭಾಗಗಳಲ್ಲಿ ಮುಖ್ಯವಾಗಿ ಆತ್ಮಕೂರು ಹಾಗೂ ನೆಲ್ಲೂರು ಕಂದಾಯ ವಿಭಾಗಗಳಲ್ಲಿ ಭಾರೀ ಮಳೆ ಸುರಿದಿದೆ. ಜಿಲ್ಲೆಯ ಅಪ್ಲಾಂಡ್ ಮಂಡಲದಲ್ಲಿ ತೊರೆ, ಕಾಲುವೆಗಳು ಉಕ್ಕಿ ಹರಿದ ಪರಿಣಾಮ ನೆರೆ ಉಂಟಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News