ಉಡುಪಿ; ನ. 22-30ರವರೆಗೆ ಕೋವಿಡ್ ಲಸಿಕಾಕರಣದಲ್ಲಿ ಮನೆ ಮನೆಗೆ ಭೇಟಿ
ಉಡುಪಿ, ನ.20: ಜಿಲ್ಲೆಯಲ್ಲಿ ನ.22ರ ಸೋಮವಾರದಿಂದ 30ರವರೆಗೆ ಕೋವಿಡ್ ಲಸಿಕಾಕರಣಕ್ಕಾಗಿ ಮನೆ ಮನೆ ಭೇಟಿ (ಹರ್ ಘರ್ ದಸ್ತಕ್) ಅಭಿಯಾನ ನಡೆಯಲಿದೆ.
ಈ ಅಭಿಯಾನದಡಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ, ಮತದಾರರ ಪಟ್ಟಿಯನುಸಾರ ಸರ್ವೆ ನಡೆಸಿ ಮೊದಲನೇ ಡೋಸ್ ಪಡೆಯದ ಹಾಗೂ ಎರಡನೇ ಡೋಸ್‌ಗೆ ಬಾಕಿ ಇರುವ ಫಲಾನುಭವಿಗಳಿಗೆ ಲಸಿಕೆ ಪಡೆಯಲು ಮನವೊಲಿಸಿ ಲಸಿಕೆ ಪಡೆಯಲು ಪ್ರೇರೇಪಿಸಲಿರುವರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 2021ರ ಜನವರಿ 16ರಿಂದ ಕೋವಿಡ್-19 ಲಸಿಕಾಕರಣ ಪ್ರಾರಂಭಿಸಲಾಗಿದ್ದು, ಆರೋಗ್ಯ ಕಾರ್ಯಕರ್ತರಿಗೆ, ಭಾರತ ಸರಕಾರ ದಿಂದ ಗುರುತಿಸಿದ ಮುಂಚೂಣಿ ಕಾರ್ಯಕರ್ತರಿಗೆ ಪ್ರಾರಂಭದಲ್ಲಿ ಲಸಿಕೆ ನೀಡಲಾ ಯಿತು. ಬಳಿಕ ಮಾರ್ಚ್ 1ರಿಂದ 60 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಮತ್ತು ರಾಜ್ಯ ಸರಕಾರದಿಂದ ಗುರುತಿಸಿದ ಮುಂಚೂಣಿ ಕಾರ್ಯಕರ್ತೆಯರಿಗೆ ಹಾಗೂ ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರಿೆ ಲಸಿಕೆ ನೀಡಲು ಪ್ರಾರಂಭಿಸಲಾಯಿತು.
18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು 9,99,000 ಗುರಿಯನ್ನು ಜಿಲ್ಲೆಗೆ ರಾಜ್ಯ ಸರಕಾರ ನಿಗದಿಪಡಿಸಿದ್ದು, ಇದುವರೆಗೆ ಒಂದನೇ ಡೋಸ್ ಲಸಿಕೆಯನ್ನು 9,24,639 (ಶೇ.92.56) ಜನರಿಗೆ ನೀಡಲಾಗಿದೆ. ಹಾಗೂ ಇವರಲ್ಲಿ ಈಗಾಗಲೇ 6,11,569 (ಶೇ.61.22) ಮಂದಿಗೆ ಎರಡನೇ ಡೋಸ್ ಲಸಿಕೆ ಯನ್ನು ಸಹ ನೀಡಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ ಸಂಭಾವ್ಯ 3ನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅದೇ ರೀತಿ 18 ವರ್ಷ ಮೇಲ್ಪಟ್ಟವರಲ್ಲಿ ಲಸಿಕೆ ಪಡೆಯ ದವರಿಗೆ ಕೋಡ್ ಕಾಯಿಲೆ ಬರುವ ಸಾಧ್ಯತೆ ಹೆಚ್ಚಾಗಿದ್ದು, ಎರಡನ್ನೂ ತಡೆಗಟ್ಟಲು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕುವುದು ಬಹಳ ಮುಖ್ಯವಾಗಿದೆ. ಆದ್ದರಿಂದ ಕೋವಿಡ್ ಲಸಿಕೆ ಪಡೆಯದ 18 ವರ್ಷ ಮೇಲ್ಪಟ್ಟ ಎಲ್ಲರೂ ಮತ್ತು 2ನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರು (ಪ್ರಥಮ ಡೋಸ್ ಕೋವಿಶೀಲ್ಡ್ ಪಡೆದು 84 ದಿನ ದಾಟಿದವರು ಹಾಗೂ ಪ್ರಥಮ ಡೋಸ್ ಕೋವ್ಯಾಕ್ಸಿನ್ ಪಡೆದು 28 ದಿನ ದಾಟಿದವರು) ಕೂಡಲೇ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆದು ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೆೀಕು ಎಂದವರು ಮನವಿ ಮಾಡಿದ್ದಾರೆ.
ಕೋವಿಡ್-19 ಪ್ರಥಮ ಮತ್ತು 2ನೇ ಡೋಸ್ ಲಸಿಕಾರಣದಲ್ಲಿ ಶೇ.100 ಗುರಿಯನ್ನು ಸಾಧಿಸಬೇಕಾಗಿದ್ದು, 18 ವರ್ಷ ಮೇಲ್ಪಟ್ಟವರಲ್ಲಿ ಇದುವರೆಗೂ ಕೋವಿಡ್ ಲಸಿಕೆ ಪಡೆಯದವರು ಲಸಿಕಾ ಕೇಂದ್ರಕ್ಕೆ ಬಂದು ಪ್ರಥಮ ಡೋಸ್ ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು ಮತ್ತು ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಮೊದಲ ಡೋಸ್ ಲಸಿಕೆ ಪಡೆದು ಕ್ರಮವಾಗಿ 84 ಮತ್ತು 28 ದಿನಗಳು ಮೀರಿದವರು 2ನೇ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆಯಬೇಕು. ಕೋವಿಡ್ ಲಸಿಕೆ ಪಡೆಯುವವರಿಗೆ ಯಾವುದೇ ಲಸಿಕಾ ಕೇಂದ್ರದಲ್ಲಿ ಕೋವಿಡ್ -19 ಮಾದರಿ ಪರೀಕ್ಷೆ ಮಾಡುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಶೇ.100ರ ಗುರಿ ಸಾಧಿಸಲು ಎಲ್ಲರೂ ಜಿಲ್ಲಾಡಳಿತ ದೊಂದಿಗೆ ಕೈ ಜೋಡಿಸುವಂತೆ ಡಿಎಚ್‌ಓ ಡಾ.ನಾಗಭೂಷಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.