×
Ad

ಗಾಂಧೀಜಿ ಚಿಂತನೆ ಎಂದೂ ಸಕಾಲಿಕ: ಇಂದಿರಾ ಕೃಷ್ಣಪ್ಪ

Update: 2021-11-20 21:41 IST

ಉಡುಪಿ, ನ.20: ಗಾಂಧಿ ಚಿಂತನೆಗಳು ಎಂದಿಗಿಂತ ಇಂದು ಮಹತ್ವವನ್ನು ಪಡೆಯುತ್ತಿರುವುದು ಮಹತ್ತರ ವಿಚಾರವಾಗಿದೆ. ಕೊರೋನ ನಮಗೆ ಕಲಿಸಿದ ಪಾಠಗಳಲ್ಲಿ ಗಾಂಧಿ ಚಿಂತನೆ ಪ್ರಸ್ತುತತೆಯೂ ಒಂದು. ಗ್ರಾಮೀಣ ಅಭಿವೃದ್ದಿ, ನೈರ್ಮಲ್ಯ, ವೈಯುಕ್ತಿಕ ಶಿಸ್ತು, ಆರೋಗ್ಯ ಕುರಿತಾದ ಕಾಳಜಿಗಳ ಬಗ್ಗೆ ಗಾಂಧೀಜಿಯವರ ಚಿಂತನೆಗಳು ಎಂದೂ ಸಕಾಲಿಕ ಎಂದು ಖ್ಯಾತ ಚಿಂತಕಿ ಹಾಗೂ ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಹೇಳಿದ್ದಾರೆ.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಜ್ಯಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಗಾಂಧಿ ಚಿಂತನೆಗಳ ಪ್ರಸ್ತುತತೆ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧಿ ಚಿಂತನೆಯ ಬಗ್ಗೆ ಉಪನ್ಯಾಸ ನೀಡಿದ ಹೆಬ್ರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ರಾದ ಡಾ. ಪ್ರಸಾದ್ ರಾವ್ ಎಂ., ಹಿಂಸಾತ್ಮಕ ಹೋರಾಟದಿಂದ ಗಳಿಸಿದ ಜಯ ಯಾವತ್ತೂ ಕ್ಷಣಿಕ. ಹಿಂಸೆಯಿಂದ ಪ್ರತಿ ಹಿಂಸೆ ಮಾತ್ರ ಹುಟ್ಟುತ್ತದೆ ಎನ್ನುವ ಗಾಂಧಿಯ ಮಾತು ಎಲ್ಲಾ ಕಾಲಕ್ಕೂ ಪ್ರಸ್ತುತ. ಶಾಂತಿಗಾಗಿ ಹೋರಾಟ ಎಂದರೆ ಅದು ನೈತಿಕವಾಗಿಯೂ ಮತ್ತು ಅಂಸಾತ್ಮಕವಾಗಿಯೂ ಇರಲೇಬೇಕಾಗುತ್ತದೆ. ಈ ಕಾರಣದಿಂದ ನೈತಿಕ ವ್ಯಕ್ತಿತ್ವ ಬೆಳೆಸಿಕೊಂಡಾಗ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಮಂಜುನಾಥ ಸ್ವಾಗತಿಸಿ, ಉಪನ್ಯಾಸಕ ದಯಾನಂದ ಕುಮಾರ್ ನಿರೂಪಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕಿ ಪ್ರತಿಮಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News