ಪಡುಬಿದ್ರಿ : ಬೇಡಿಕೆ ಈಡೇರಿಸಲು ಒತ್ತಾಯಿಸಿ ಪೋಷಕರ ಧರಣಿ

Update: 2021-11-20 16:21 GMT

ಪಡುಬಿದ್ರಿ: ಶಿಕ್ಷಕರ ಹಾಗೂ ಮೂಲಸೌಕರ್ಯಗಳ ಕೊರತೆ ಸಹಿತ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಪಡುಬಿದ್ರಿ ಪಬ್ಲಿಕ್ ಸ್ಕೂಲ್‍ನ ಮುಂಭಾಗ ವಿದ್ಯಾರ್ಥಿಗಳ ಪೋಷಕರು, ಹಳೇ ವಿದ್ಯಾರ್ಥಿಗಳು, ಎಸ್‍ಡಿಎಮ್‍ಸಿ ಸದಸ್ಯರು ಶನಿವಾರ ಶಾಲೆ ಬಳಿ ಧರಣಿ ಮುಷ್ಕರ ನಡೆಸಿದರು.

ನಮಗೆ ಮಕ್ಕಳನ್ನು ಶಾಲೆಗೆ ಕಳುಹಿಸಲೇ ಅಸಾಧ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಸಾಂಕೇತಿಕವಾಗಿ ಧರಣಿ ಮುಷ್ಕರ ನಡೆಸಿದ್ದೇವೆ. ನಮ್ಮ ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದಲ್ಲಿ ಗ್ರಾಮಸ್ಥರನ್ನು ಒಗ್ಗೂಡಿಸಿ ತೀವ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಪಡುಬಿದ್ರಿ ಬೋರ್ಡು ಶಾಲೆಯನ್ನು ಕೆಪಿಎಸ್ ಆಗಿ ಮಾರ್ಪಾಟು ಮಾಡಿದ  ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಆದರೆ ಶಿಕ್ಷಕರ ಕೊರತೆ ಇದೆ. 248 ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಪ್ರಸ್ತುತ ಕೇವಲ 3 ಶಿಕ್ಷಕರಿದ್ದಾರೆ. ಇಬ್ಬರನ್ನು ಅರೆಕಾಲಿಕ ಶಿಕ್ಷಕರನ್ನಾಗಿ ನೇಮಿಸಲಾಗಿದೆ. ಅದರೆ ಎಲ್‍ಕೆಜಿ, ಯುಕೆಜಿ ಸಹಿತ 7ನೇ ತರಗತಿವರೆಗಿನ ಮಕ್ಕಳಿಗೆ ಮೂವರು ಶಿಕ್ಷಕರಿಂದ ವಿದ್ಯೆ ನೀಡಲು ಅಸಾಧ್ಯವಾಗಿದೆ. ಜತೆಗೆ ಶಾಲಾ ಕಟ್ಟಡಕ್ಕೆ 92 ವರ್ಷವಾಗಿದ್ದು, ಹಳೇ ಕಟ್ಟಡದಲ್ಲಿ ಶಾಲೆ ನಡೆಸಲು ಅಸಾಧ್ಯ. ಅಷ್ಟೂ ಮಕ್ಕಳಿಗೆ ಒಂದೇ ಒಂದು ಶೌಚಾಲಯವಿದ್ದು, ಅಸಹನೀಯ ಪರಿಸ್ಥಿತಿ ಎದುರಾಗಿದೆ. ನಮ್ಮ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ಜನಪ್ರತಿನಿಧಿಗಳಿಗೆ, ಸ್ಥಳೀಯಾಡಳಿತ ಹಾಗೂ ಇಲಾಖಾಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಎಂದು ಎಸ್‍ಡಿಎಮ್‍ಸಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಆರೋಪಿಸಿದ್ದಾರೆ.

ಶಾಲೆಯಲ್ಲಿ 115 ಬಾಲಕಿಯರಿದ್ದು, ಒಂದೇ ಶೌಚಾಲಯ ಉಪಯೋಗಿಸುವುದು ಅಸಾಧ್ಯ. ಎಲ್‍ಕೆಜಿ ಮತ್ತು ಯುಕೆಜಿಯಲ್ಲಿ ತಲಾ 60 ವಿದ್ಯಾರ್ಥಿಗಳಿದ್ದು, ತರಗತಿ ನಡೆಸುವುದೇ ಕಷ್ಟಕರವಾಗಿದೆ. ಅಲ್ಲದೆ ಎರಡೂ ತರಗತಿಗಳಿಗೆ ಒಬ್ಬರೇ ಶಿಕ್ಷಕರು. ಇಲ್ಲಿ ಯಾವುದೇ ಸಾಮಾಜಿಕ ಅಂತರವಿಲ್ಲ. ಶಾಲೆಗೆ ಸೂಕ್ತ ಆವರಣ ಗೋಡೆಯೂ ಇಲ್ಲ. ಶಾಲಾ ಆವರಣದಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡುತ್ತಿದ್ದು, ಪೋಲಿಸರೂ ಯಾವುದೇ ಕ್ರಮ ಕೈಗೊಂಡಿಲ್ಲ. ಉಪಾಧ್ಯಕ್ಷೆ ವಿನಯಲಕ್ಷ್ಮಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ಪಿಆರ್, ಕೋಶಾಧಿಕಾರಿ ಕೀರ್ತಿ ಕುಮಾರ್ ಅವಲತ್ತುಕೊಂಡಿದ್ದು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News