ಕೃಷಿ ಕಾನೂನುಗಳ ವಾಪಸ್‌ ಗೆ ಅಮೆರಿಕ, ಕೆನಡ ಸಂಸದರ ಸ್ವಾಗತ

Update: 2021-11-20 18:19 GMT

ವಾಶಿಂಗ್ಟನ್,ನ.20: ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ರದ್ದುಡಿಸುವ ಮೋದಿ ಸರಕಾರದ ನಿರ್ಧಾರವನ್ನು ಅಮೆರಿಕ, ಕೆನಡಾ ಹಾಗೂ ಬ್ರಿಟನ್ ನ ಸಂಸದರು ಹಾಗೂ ಸಾಮಾಜಿಕ ಹೋರಾಟಗಾರರು ಸ್ವಾಗತಿಸಿದ್ದಾರೆ.

‘‘ ಒಂದು ವರ್ಷಕ್ಕೂ ಅಧಿಕ  ಸಮಯದವರೆಗೆ ನಡೆದ ಪ್ರತಿಭಟನೆಯ ಬಳಿಕ ಭಾರತದಲ್ಲಿ ಮೂರು ಕೃಷಿ ಕಾನೂನುಗಳು ರದ್ದಾಗಿರುವುದನ್ನು ನೋಡಲು ಸಂತಸವಾಗುತ್ತಿದೆ’’ ಎಂದು ಅಮೆರಿಕದ ಕಾಂಗ್ರೆಸ್ ಸಂಸದ ಆ್ಯಂಡಿ ಮ್ಯಾನ್ ಟ್ವೀಟಿಸಿದ್ದಾರೆ.

 ಬ್ರಿಟನ್‌ನಲ್ಲಿ ಲೇಬರ್ ಪಕ್ಷದ ಸಂಸತ್ ಸದಸ್ಯರಾದ ತಮನ್‌ಜಿತ್ ಕೂಡಾ ಕೃಷಿ ಕಾನೂನುಗಳನ್ನು ಭಾರತ ಸರಕಾರ ವಾಪಸ್ ಪಡೆದಿರುವುದನ್ನು ಸ್ವಾಗತಿಸಿದ್ದು ರೈತರು ವಿರೋಚಿತ ಹೋರಾಟದ ಫಲವಾಗಿ, ವಿವಾದಾತ್ಮಕ ಕೃಷಿ ಕಾನೂನುಗಳು ರದ್ದುಗೊಂಡಿವೆ ಎಂದು ಅಭಿಪ್ರಾಯಿಸಿದರು.

  ಈ ವರ್ಷದ ಜನವರಿಯಲ್ಲಿ ತಮನ್‌ಜಿತ್ ದೇಸಿ ಸೇರಿದಂತೆ 100 ಮಂದಿ ಬ್ರಿಟಿಶ್ ಸಂಸದರು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸುವ ಸಂದರ್ಭ ರೈತರ ಪ್ರತಿಭಟನೆ ಬಗ್ಗೆ ಪ್ರಸ್ತಾಪಿಸಬೇಕೆಂದು ಆಗ್ರಹಿಸಿದ್ದರು.

ಭಾರತ ಸರಾಕರವು ಕೊನೆಗೂ ಪೌರರ ಧ್ವನಿಗೆ ಕಿವಿಗೊಟ್ಟಿದೆ ಹಾಗೂ ಕೃಷಿ ಕಾನೂನುಗಳ ಬಗ್ಗೆ ಪುನರ್ವಿಮರ್ಶೆ ಮಾಡಿದೆ ಎಂದು ಬ್ರಿಟನ್‌ನ ಈಲಿಂಗ್ ಸೌತ್‌ಹಾಲ್‌ನ ಎಂಪಿ ವೀರೇಂದ್ರ ಶರ್ಮಾ ಪ್ರತಿಕ್ರಿಯಿಸಿದ್ದಾರೆ.

ಇತ್ತ ಕೆನಡದ ಸಂಸದರಿಂದಲೂ ಭಾರತ ಸರಕಾರದ ನಿರ್ಧಾರಕ್ಕೆ ಭಾರೀ ಸ್ವಾಗತ ವ್ಯಕ್ತವಾಗಿದೆ. ಮೂಲತಃ ಚಂಡೀಗಢದವರಾಗಿದ್ದು, ಈಗ ಕೆನಡ ಬ್ರಿಟಿಷ್ ಕೊಲಂಬಿಯಾ ರಾಜ್ಯದ ಸಂಸದೀಯ ಕಾರ್ಯದರ್ಶಿಯಾದ ರಚನಾ ಸಿಂಗ್ ಅವರು , ‘‘ ರೈತರ ಪ್ರತಿಭಟನೆಗೆ ದೊರೆತ ಭಾರೀ ಗೆಲುವು ಇದಾಗಿದೆ’’ ಎಂದು ಬಣ್ಣಿಸಿದ್ದಾರೆ.

ಬ್ರಿಟನ್ ನ ಹಿಂದೂ ಚಿಂತನ ಚಿಲುಮೆ ಸಂಘಟನೆಯ ಅಧ್ಯಕ್ಷರಾದ ಸಂಜಯ್ ಜಗತಿಯಾ ಅವರು ಕೃಷಿ ಕಾಯ್ದೆಯನ್ನು ವಾಪಸ್ ಪಡೆಯ ಮೋದಿ ಸರಕಾರದ ನಿರ್ಧಾರ ಹೃದಯ ಸ್ಪರ್ಶಿಯಾಗಿದೆ ಎಂದವರು ಹೇಳಿದ್ದಾರೆ. ಇದೀಗ ರೈತರು ತಮ್ಮ ಪ್ರತಿಭಟನೆಯನ್ನು ಹಿಂಪಡೆಯುವರು ಎಂದು ನಾವು ಆಶಿಸುತ್ತೇವೆ’ ಎಂದವರು ಹೇಳಿದ್ದಾರೆ.
  
ಬ್ರಿಟನ್ ನ ಸರ್ವೋಚ್ಚ ಸಿಖ್ಖ್ ಮಂಡಳಿಯ ಮಹಾಕಾರ್ಯದರ್ಶಿ ಗುರ್ಮೀತ್ ಸಿಂಗ್ ಕಂಡೊಲಾ ಅವರು ಹೇಳಿಕೆಯೊಂದನ್ನು ನೀಡಿ ‘‘ ಪ್ರತಿಭಟನಾ ನಿರತ ರೈತರಿಗೆ ಮಾನವೀಯ ನೆರವನ್ನು ಒದಗಿಸಿದ್ದಕ್ಕಾಗಿ ಹಲವಾರು ಅನಿವಾಸಿ ಸಿಖ್ಖರನ್ನು ಖಳನಾಯಕರೆಂಬಂತೆ ಬಿಂಬಿಸಲಾಗಿತ್ತು ಎಂದು ತಿಳಿಸಿದ್ದಾರೆ. ಭಾರತ ಸರಕಾರವು ಇನ್ನಾದರೂ ರೈತ ಪ್ರತಿನಿಧಿಗಳ ಜೊತೆ ರಚನಾತ್ಮಕ ಮಾತುಕತೆಯಲ್ಲಿ ತೊಡಗು ಅಗತ್ಯವಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News