ರಾಜಸ್ಥಾನ ಸಚಿವ ಸಂಪುಟ ಪುನಾರಚನೆಯಿಂದ ಸಂತೋಷವಾಗಿದೆ : ಸಚಿನ್ ಪೈಲಟ್

Update: 2021-11-21 05:53 GMT

ಜೈಪುರ: ರಾಜಸ್ಥಾನದ ಸಚಿವ ಸಂಪುಟ ಪುನಾರಚನೆಯಿಂದ ನನಗೆ ಸಂತೋಷವಾಗಿದೆ. ಪಕ್ಷದ ಹೈಕಮಾಂಡ್  ನನ್ನ ಕಳವಳವನ್ನು ಪರಿಹರಿಸಿದ್ದಕ್ಕಾಗಿ ಸಂತುಷ್ಟನಾಗಿದ್ದೇನೆ  ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ.

ಸಚಿವ ಸಂಪುಟ ಪುನಾರಚನೆಗೆ ಸೋನಿಯಾ ಗಾಂಧಿ, ಅಜಯ್ ಮಾಕನ್ ಹಾಗೂ ಅಶೋಕ್ ಗೆಹ್ಲೋಟ್ ಅವರಿಗೆ ಧನ್ಯವಾದ ಅರ್ಪಿಸಿದ ಅವರು "ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಬಗ್ಗೆ ಏಕೆ ಹೆಚ್ಚು ಮಾತನಾಡುತ್ತಿದ್ದಾರೆ. ನಾವು ಒಟ್ಟಿಗೆ ಇದ್ದೇವೆ. 2023ರಲ್ಲಿ ರಾಜಸ್ಥಾನದಲ್ಲಿ ನಾವು ಒಟ್ಟಿಗೆ ಚುನಾವಣೆಯಲ್ಲಿ ಹೋರಾಡಿದರೆ  ಸರಕಾರ ರಚಿಸಬಹುದು. ಕಾಂಗ್ರೆಸ್‌ನಲ್ಲಿರುವುದು ಒಂದೇ  ಬಣ" ಎಂದು ಅವರು ಹೇಳಿದರು.

ಹೊಸ ಕ್ಯಾಬಿನೆಟ್ ಪಟ್ಟಿ ಉತ್ತಮ ಸಂದೇಶವನ್ನು ಕಳುಹಿಸುತ್ತದೆ. ನಮ್ಮ ದಲಿತ ಹಾಗೂ ಬುಡಕಟ್ಟು ಬಂಧುಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿದೆ. ಇದು ತುಂಬಾ ಒಳ್ಳೆಯ ಸಂಗತಿ ಎಂದರು.

ರಾಜಸ್ಥಾನ ಸಚಿವ ಸಂಪುಟ ರವಿವಾರ ಪುನಾರಚನೆಯಾಗಲಿದ್ದು, ಸಂಪುಟದಲ್ಲಿ 12 ಮಂದಿ ಹೊಸಬರಿಗೆ ಅವಕಾಶ ನೀಡಲಾಗುತ್ತಿದೆ. ಈ ಪೈಕಿ ಸಚಿನ್ ಪೈಲಟ್ ಬಣದ ಐವರಿಗೆ ಅವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಶೋಕ್ ಗೆಹ್ಲೋಟ್ ನೇತೃತ್ವದ ಸಂಪುಟದಲ್ಲಿ 30 ಸಚಿವರು ಇರಲಿದ್ದಾರೆ. ಎಸ್ ಸಿ ಸಮುದಾಯದ ಮೂವರಿಗೆ ಸಂಪುಟ ದರ್ಜೆ ನೀಡಲಾಗುತ್ತಿದೆ. ರಾಜ್ಯದ ಹೊಸ ಸಂಪುಟವು ಇದೇ ಮೊದಲ ಬಾರಿ ನಾಲ್ವರು ಎಸ್ ಸಿ ಸಮುದಾಯದವರನ್ನು ಹೊಂದಿರಲಿದೆ. ಎಸ್ ಟಿ ಸಮುದಾಯದ ಮೂವರಿಗೂ ಸಚಿವ ಸ್ಥಾನ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News