×
Ad

ಒಂದೆಜ್ಜೆ ಹಿಂದೆ ಇಟ್ಟರೂ ಮುಂದೆ 2 ಹೆಜ್ಜೆ ಮುಂದಿಡುತ್ತೇವೆ : ಕಲ್ಲಡ್ಕ ಪ್ರಭಾಕರ್ ಭಟ್

Update: 2021-11-21 20:03 IST
ಕಲ್ಲಡ್ಕ ಪ್ರಭಾಕರ್ ಭಟ್

ಉಡುಪಿ, ನ.21: ಕೇಂದ್ರ ಸರಕಾರ ಕೃಷಿ ಕಾಯ್ದೆಯನ್ನು ವಾಪಸ್ಸು ಪಡೆಯುವ ಮೂಲಕ ಒಂದು ಹೆಜ್ಜೆ ಹಿಂದೆ ಬಂದಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಮುಂದೆ ಎರಡು ಹೆಜ್ಜೆ ಮುಂದಿಡುತ್ತೇವೆ ಮತ್ತು ಸಣ್ಣಪುಟ್ಟ ತಿದ್ದುಪಡಿಯೊಂದಿಗೆ ಮತ್ತೆ ಮಂಡನೆ ಮಾಡಿಯೇ ಮಾಡುತ್ತೇವೆ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಯ್ದೆಯನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಗೊಂದಲ ನಿರ್ಮಾಣವಾಗಿತ್ತು. ಒಂದು ಒಳ್ಳೆಯ ಮಸೂದೆಯನ್ನು ವಾಪಾಸು ಪಡೆದುಕೊಳ್ಳಲಾಗಿದೆ. ಕೂತು ಚರ್ಚಿಸಲು ಹೋರಾಟಗಾರರು ತಯಾರಿರಲಿಲ್ಲ. ನಮ್ಮ ದೇಶದಲ್ಲಿ ವಿಪಕ್ಷಗಳು ವಿರೋಧಪಕ್ಷಗಳಾಗಿವೆ. ಅದೇ ದೊಡ್ಡ ಸಮಸ್ಯೆಯಾಗಿದೆ. ಎದುರು ಪಕ್ಷ ಬೇಕು. ಆದರೆ ವಿರೋಧಿ ಪಕ್ಷ ಆಗಬಾರದು. ಎಲ್ಲದಕ್ಕೂ ವಿರೋಧ ಮಾಡಬಾರದು ಎಂದರು.

ಕೇಂದ್ರ ಸರಕಾರ ಮತ್ತೆ ರೈತರ ಜೊತೆ ಚರ್ಚಿಸಲಿದೆ. ಸರಕಾರದ ಜೊತೆ ಚರ್ಚಿಸದೆ ವಿರೋಧಿಸುವುದು ಪ್ರಜಾಪ್ರಭುತ್ವವೇ ಎಂದು ಪ್ರಶ್ನಿಸಿದ ಅವರು, ಕರ್ನಾಟಕದಲ್ಲೂ ಸರಕಾರದ ಜೊತೆ ವಿಪಕ್ಷಗಳು ಚರ್ಚಿಸಲು ಸಿದ್ಧವಿರಲಿಲ್ಲ. ವಿರೋಧಿಗಳು ರಾಜಕೀಯ ಲಾಭ ಪಡೆಯುವ ಉದ್ದೇಶ ಹೊಂದಿದ್ದಾರೆ ಎಂದು ಅವರು ತಿಳಿಸಿದರು.

ನಾವು ರಾಜಕೀಯ ಲಾಭದ ಉದ್ದೇಶದಿಂದ ಕಾಯಿದೆಯನ್ನು ವಾಪಸು ಪಡೆದಿದ್ದಲ್ಲ. ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಕೊಂಡು ವಾಪಾಸು ಪಡೆಯಲಾಗಿದೆ. ಎಲ್ಲಾ ಕಾಯ್ದೆಗಳನ್ನು ಬೀದಿಯಲ್ಲಿ ನಿಂತು ನಿರ್ಧರಿಸುವುದು ಸಾಧ್ಯವಿಲ್ಲ. ಈ ಕಾಯಿದೆ ಕುರಿತು ಒಂದು ವರ್ಷಗಳ ಕಾಲ ಕೇಂದ್ರ ಸರಕಾರ ಮನವೊಲಿಸಲು ಪ್ರಯತ್ನ ಮಾಡಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News