ಗಣಿಗಾರಿಕೆ ನಿಲ್ಲಿಸದಿದ್ದರೆ ಜಿಲ್ಲಾಧಿಕಾರಿಯ ಕೊರಳಪಟ್ಟಿ ಹಿಡಿಯುತ್ತೇವೆ: ಜಗದೀಶ್ ಕಾರಂತ

Update: 2021-11-21 14:44 GMT

ಬಂಟ್ವಾಳ, ನ. 21: ಕಾರಿಂಜ ದೇವಸ್ಥಾನದ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ತಿಂಗಳೊಳಗೆ ನಿಲ್ಲಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಲಗ್ಗೆ ಹಾಕಿ ಜಿಲ್ಲಾಧಿಕಾರಿಯ ಕೊರಳಪಟ್ಟಿ ಹಿಡಿಯುತ್ತೇವೆ ಎಂದು ಹಿಂದೂ ಜಾಗರಣ ವೇದಿಕೆಯ ಕ್ಷೇತ್ರಿಯಾ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ ಹೇಳಿದ್ದಾರೆ.

ಕಾರಿಂಜ ದೇವಸ್ಥಾನದ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಹಾಗೂ ದೇವಸ್ಥಾನದ ಪವಿತ್ರತೆಗೆ ದಕ್ಕೆ ಮಾಡುವುದರ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ ಕಾರಿಂಜ ರಥಬೀದಿಯಲ್ಲಿ ರವಿವಾರ ಸಂಜೆ ಹಮ್ಮಿಕೊಂಡ 'ರುದ್ರಗಿರಿಯ ರಣಕಹಳೆ' ಜನಜಾಗೃತಿ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. 

ಅಕ್ರಮ ಗಣಿಗಾರಿಕೆ ನಿಲ್ಲಿಸಲು ಜಿಲ್ಲಾಧಿಕಾರಿಗೆ 30 ದಿನಗಳ ಕಾಲಾವಕಾಶ ನೀಡುತ್ತಿದ್ದೇವೆ. ತಪ್ಪಿದ್ದಲ್ಲಿ ಡಿ.21ರಂದು ಸಾವಿರಾರು ಜನರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಲಗ್ಗೆ ಹಾಕಿ ಜಿಲ್ಲಾಧಿಕಾರಿಯ ಕೊರಳು ಪಟ್ಟಿಯನ್ನು ಹಿಡಿಯುತ್ತೇವೆ. ತಾಕತ್ತಿದ್ದರೆ ಗಣಿಗಾರಿಕೆ ನಿಲ್ಲಿಸು. ಇಲ್ಲದಿದ್ದರೆ ವರ್ಗಾವಣೆ ತೆಗೆದು ಹೊರಗೆ ಹೋಗು ಎಂದು ಜಗದೀಶ್ ಕಾರಂತ ಏಕವಚನದಲ್ಲೇ ಜಿಲ್ಲಾಧಿಕಾರಿಗೆ ಎಚ್ಚರಿಕೆ ನೀಡಿದರು.

ಗಣಿಗಾರಿಕೆ ನಿಲ್ಲಿಸುವಂತೆ 2007ರಿಂದ ಮನವಿ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ಜಿಲ್ಲೆಯಲ್ಲಿರುವ ಮುಜರಾಯಿ ದೇವಸ್ಥಾನಗಳ ಸಂರಕ್ಷನೂ ಆಗಿದ್ದಾನೆ. ಜಿಲ್ಲಾಧಿಕಾರಿಗೆ ಕಾರು, ಬಂಗಲೆ, ಐಶಾರಾಮಿ ಜೀವನ ಬ್ರಿಟಿಷರು ಕೊಟ್ಟ ಕೊಡುಗೆ. ಆತ ಇಡೀ ಜಿಲ್ಲೆಯ ಆಡಳಿತದ ಸರ್ವಾಧಿಕಾರಿ. ಪ್ರಜಾತಂತ್ರ ಬಂದರೂ ಆ ಅಧಿಕಾರವನ್ನು ಅನುಭವಿಸುವ ಜಿಲ್ಲಾಧಿಕಾರಿ ಮುಜರಾಯಿ ದೇವಸ್ಥಾನ ರಕ್ಷಿಸುವ ಹೊಣೆಯನ್ನು ಹೊತ್ತವ. ಗಣಿಗಾರಿಕೆಯಿಂದ ಕಾರಿಂಜ ದೇವಸ್ಥಾನದ ಅಸ್ತಿತ್ವಕ್ಕೆ ಅಪಾಯವಿದ್ದರೂ ಅವನು ಇಷ್ಟರವರೆಗೆ ಎಲ್ಲಿ ಸತ್ತು ಹೋಗಿದ್ದ ಎಂದು ಅವರು ಪ್ರಶ್ನಿಸಿದರು.

ಅಧಿಕಾರ ಬೇಕು, ಕಾರು ಬೇಕು, ಬಂಗಲೆ ಬೇಕು. ಮೋಜು ಮಸ್ತಿ ಮಾಡೋಕೆ ಮಂಗಳೂರು ಬೇಕು. ಗಣಿಗಾರಿಕೆ ಬಗ್ಗೆ ಹತ್ತಾರು ಬಾರಿ ದೂರು ನೀಡಿದರೂ ನೀನು ಕಣ್ಣನ್ನು ತೆರೆದಿಲ್ಲ, ಕಿವಿಯಲ್ಲಿ ಕೇಳಿಸಿಲ್ಲ ಅಂದರೆ ನೀನು ಆ ಜಾಗಕ್ಕೆ ನಾಲಾಯಕ್ಕು. ಬೀದರ್, ರಾಯಚೂರಿನಲ್ಲಿ ನಿನ್ನ ಬೇಜಾಬ್ದಾರಿ, ಅಧಿಕಾರದ ದಾಹದ ಆಟಗಳು ನಡೆಯಬಹುದು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಜನ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಜಗದೀಶ್ ಕಾರಂತ ಹೇಳಿದರು. 

ಅಕ್ರಮ ಗಣಿಗಾರಿಕೆ ನಿಲ್ಲಿಸುವಲ್ಲಿ ಅಧಿಕಾರಿಗಳು ಮಾತ್ರ ಭ್ರಷ್ಟರಾಗಿಲ್ಲ. ಅವರನ್ನು ನಿಯಂತ್ರಿಸುವ ರಾಜಕಾರಣಿಗಳು ಕೂಡಾ ಭ್ರಷ್ಟರಾಗಿದ್ದಾರೆ. ಸರಕಾರಿ ಜಾಗದಲ್ಲೇ ಗಣಿಗಾರಿಕೆ ನಡೆಯುತ್ತಿದೆ. ಜಿಲ್ಲೆಗೆ ಉಸ್ತುವಾರಿ ಮಂತ್ರಿ ಇದ್ದಿದ್ದರೆ ಅವನಿಗೆ ಇದು ಗೊತ್ತಾಗಬೇಕಿತ್ತು‌‌. ಇಲ್ಲಿಗೆ ಒಬ್ಬ ಶಾಸಕ ಇದ್ದಿದ್ದರೆ ಅವನ ಕಿವಿಗೆ ಬೀಳಬೇಕಿತ್ತು. ಅವರು ಯಾರಿಗೆ ಮೋಸ, ವಂಚನೆ, ದ್ರೋಹ ಮಾಡುತ್ತಿದ್ದಾರೆ. ಆಗದಿದ್ದ ಅವರು ರಾಜೀನಾಮೆ ನೀಡಲಿ ಎಂದರು. 

ಈ ಸಭೆಯ ಉದ್ದೇಶ ಕೇವಲ ರಣಕಹಳೆ ಊದೂದು ಅಲ್ಲ. ರಣಕಹಳೆ ಊದಿದ ಮೇಲೆ ಯುದ್ಧ ಆರಂಭವಾಗಲಿದೆ. ಹಿಂದೂ ಹಿಂದೂ ಎಂದು ಘೋಷಣೆ ಹಾಕಿದರೆ ಜನರು ನಮ್ಮನ್ನು ನಂಬುವುದಿಲ್ಲ. ಹಿಂದೂ ಅನ್ನುವುದು ಆಚರಣೆಗೆ ಬರಬೇಕು. ಅದು ಇವತ್ತೇ ಬರಬೇಕು. ತಂದೆ ತಪ್ಪು ಮಾಡಿದರೆ ಕೂಡಾ ಕಪಾಲಕ್ಕೆ ಹೊಡೆಯುವ ಮಕ್ಕಳು ಹುಟ್ಟಿದರೆ ಮಾತ್ರ ಧರ್ಮ ಉಳಿಯುತ್ತದೆ, ದೇಶ ಉಳಿಯುತ್ತದೆ. ಮುಲಾಜಿಗೆ ಒಳಗಾಗುವವರಿಗೆ ಧರ್ಮವನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಅಕ್ರಮ ಗಣಿಗಾರಿಕೆಯನ್ನು 24 ಗಂಟೆಯೊಳಗೆ ನಿಲ್ಲಿಸುವ ಅಧಿಕಾರ ಜಿಲ್ಲಾ ಉಸ್ತುವಾರಿ ಮಂತ್ರಿ ಮತ್ತು ಜಿಲ್ಲಾಧಿಕಾರಿಗೆ ಇದೆ. ಗಣಿಗಾರಿಕೆ ನಿಲ್ಲಿಸಲು ಅಸಾಧ್ಯವಾದರೆ ರಾಜೀನಾಮೆ ನೀಡಿ ಮನೆಗೆ ಹೋಗು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ತಾಕೀತು ಮಾಡಿದ ಜಗದೀಶ್ ಕಾರಂತ, ಅಕ್ರಮ ಗಣಿಗಾರಿಕೆ ಮಾಡಿ ಒಂದೇ ಒಂದು ವಾಹನ ರಸ್ತೆಗೆ ಇಳಿಯಲು ನಾವು ಬಿಡುವುದಿಲ್ಲ. ಆಕಸ್ಮಾತ್ ವಾಹನ ರಸ್ತೆಗೆ ಇಳಿದರೆ ಅದರ ಡ್ರೈವರ್ ಜೀವಂತವಾಗಿ ಹೋಗುವುದಿಲ್ಲ ಎಂದು ನುಡಿದರು. 

ಅನ್ಯಮತೀಯರು ಬಂದು ದೇವಸ್ಥಾನದ ಪರಿಸರದಲ್ಲಿ ಅನೈತಿಕ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದವರ ಮೇಲೆಯೇ ಪೊಲೀಸರು ದೂರು ದಾಖಲಿಸುತ್ತಾರೆ. ಹಿಂದೆ ಸೆಕ್ಯುಲರ್ ಸರಕಾರ ಇದ್ದಾಗ ಇದು ನಡೆಯುತ್ತಿತ್ತು. ಪ್ರಸಕ್ತ ಹಿಂದೂ ಸರಕಾರ ಇದ್ದರೂ ನಡೆಯುತ್ತಿದೆ ಎಂದರು.

ಗಣಿಗಾರಿಕೆಯ ಲಾರಿಗಳು ಢಿಕ್ಕಿ ಹೊಡೆದ ರಿಕ್ಷಾ ಚಾಲಕರ ವಿರುದ್ಧವೇ ದೂರು ದಾಖಲಿಸುತ್ತಾರೆ. ನಾವು ರೊಚ್ಚಿಗೇಳಲು, ಸಿಟ್ಟುಗೊಳ್ಳಲು ಇನ್ನೇನು ಅಂಶಗಳು ಬೇಕು. ಇದನ್ನು ಸಹಿಸಲು ಸಾಧ್ಯವಿಲ್ಲ. ಹೀಗೆ ಮುಂದುವರಿದರೆ ನಿಮ್ಮನ್ನು ಬೆತ್ತಲೆ ಮಾಡಿ ರಸ್ತೆಯಲ್ಲಿ ಅಟ್ಟಾಡಿಸುವ ತಾಕತ್ತು ದಕ್ಷಿಣ ಕನ್ನಡ ಜಿಲ್ಲೆಯ ಯುವಕರಲ್ಲಿ ಇದೆ ಎಂದು ಅವರು ಪೊಲೀಸರ ವಿರುದ್ಧ ಹರಿಹಾಯ್ದರು. 

10 ಕಿ.ಮೀ. ವ್ಯಾಪ್ತಿಯನ್ನು ಧಾರ್ಮಿಕ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಬೇಕು. ಅಕ್ರಮ ಗಣಿಗಾರಿಕೆಯನ್ನು ಸರಕಾರ ಕೂಡಲೇ ತಡೆಯಬೇಕು. ಶಬರಿಮಲೆಯ ಮಾದರಿಯಲ್ಲಿ ಭಕ್ತಾಧಿಗಳು ಇಲ್ಲಿಗೆ ಬರುವ ಹೊಸ ಸಂಪ್ರದಾಯವನ್ನು ಆರಂಭಿಸಬೇಕು ಎಂದು ಅವರು ಇದೇ ವೇಳೆ ಹೇಳಿದರು.

ಕೊಲ್ಲೂರು, ಸುಬ್ರಹ್ಮಣ್ಯ, ಕಟೀಲಿನ ಮೇಲೆ ಇರುವ ಕಾಳಜಿ, ಕಾರಿಂಜ ಕ್ಷೇತ್ರದ ಮೇಲೆ ಯಾಕಿಲ್ಲ ? ಪ್ರಾಕೃತಿಕವಾಗಿ ರಮಣೀಯವಾಗಿರುವ ಕಾರಿಂಜೇಶ್ವ ಕ್ಷೇತ್ರದ ಅಭಿವೃದ್ದಿಗೆ ಯಾರೂ ಯಾಕೆ ತಲೆ ಕೆಡಿಸಿಕೊಂಡಿಲ್ಲ ಎಂದು ಪ್ರಶ್ನಿಸಿದ ಅವರು, ಗಣಿಗಾರಿಕೆ ಮಾಡುವವರಿಗೆ ಕಾರಿಂಜದ ಸುತ್ತಮುತ್ತಲಿರುವ ಕಲ್ಲು ಬಂಡೆಗಳ ಮೇಲೆ ಗಮನ ಬಿದ್ದಿದೆ ಎಂದರು.

ಹಿಂದೂ ಜಾಗರಣ ವೇದಿಕೆಯ ಪ್ರಾಂತೀಯ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದ್ಮನಾಭ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಜಾಗರಣ ವೇದಿಕೆಯ ಬಂಟ್ವಾಳ ಘಟಕದ ಅಧ್ಯಕ್ಷ ತಿರುಲೇಶ್ ಬೆಳ್ಳೂರು, ಪ್ರಮುಖರಾದ ಜಗದೀಶ್ ನೆತ್ತರಕೆರೆ ಮೊದಲಾದವರು ಉಪಸ್ಥಿತರಿದ್ದರು.

ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಪೂರ್ವಭಾವಿಯಾಗಿ ವಗ್ಗ ಕೇಂದ್ರ ಸ್ಥಾನದಿಂದ ಕಾರಿಂಜ ಕ್ಷೇತ್ರದ ವರೆಗೆ ಕಾಲ್ನಡಿಗೆ ಯಾತ್ರೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News