ಮೌಲಾನಾ ಆಝಾದ್ ದೇಶದ ಶೈಕ್ಷಣಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕಿದವರು: ಡಾ. ಅಬೂಬಕ್ಕರ್ ಸಿದ್ದೀಕ್

Update: 2021-11-21 17:16 GMT

ಬಂಟ್ವಾಳ, ನ.21: ಭಾರತ ಸರಕಾರದ ಪ್ರಥಮ ಶಿಕ್ಷಣ ಸಚಿವ, ಭಾರತರತ್ನ ಮೌಲಾನಾ ಅಬುಲ್ ಕಲಾಂ ಆಝಾದ್ ತಮ್ಮ ದೂರದೃಷ್ಟಿಯಿಂದ ಜಾರಿಗೆ ತಂದ ಯೋಜನೆಗಳು ದೇಶದ ಶೈಕ್ಷಣಿಕ ಪ್ರಗತಿಗೆ ಭದ್ರವಾದ ಬುನಾದಿಯನ್ನು ಹಾಕಿದೆ ಎಂದು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಧ್ಯಾಪಕ ಡಾ. ಅಬೂಬಕ್ಕರ್ ಸಿದ್ದೀಕ್ ಹೇಳಿದರು.

ಸಮನ್ವಯ ಶಿಕ್ಷಕ ಸಂಘ,‌ ದಕ್ಷಿಣ ಕನ್ನಡ ಮತ್ತು ಅದರ ಬಂಟ್ವಾಳ ಘಟಕದ ಸಹಯೋಗದಲ್ಲಿ ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ನಡೆದ ದೇಶದ ಪ್ರಥಮ‌ ಶಿಕ್ಷಣ ಸಚಿವ, ಭಾರತರತ್ನ ಮೌಲಾನಾ ಅಬುಲ್ ಕಲಾಂ ಆಝಾದ್ ಅವರ ಸ್ಮರಣಾರ್ಥ ಏರ್ಪಡಿಸಲಾದ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ರಝಾಕ್ ಅನಂತಾಡಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಶಿಕ್ಷಕರು ಸಜ್ಜಾಗಬೇಕಾದರೆ ನಿರಂತರ ಅಧ್ಯಯನಶೀಲ ಮನೋಭಾವನೆಯಿಂದ  ವಿದ್ಯಾರ್ಥಿ ಗಳಾಗಿ ಬದಲಾಗಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು.

ಸಭೆಯಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗಾಗಿ ಏರ್ಪಡಿಸಲಾದ ಲೇಖನ, ರಸಪ್ರಶ್ನೆ, ಭಾಷಣ, ವಾರ್ತಾ ವಾಚನ‌ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಸಂಘದ ಪೂರ್ವಾಧ್ಯಕ್ಷ ಯೂಸುಫ್ ವಿಟ್ಲ, ಕಾರ್ಯದರ್ಶಿ ‌ಮುಹಮ್ಮದ್ ಮನಾಝಿರ್ ಮುಡಿಪು, ಬಂಟ್ವಾಳ ಘಟಕಾಧ್ಯಕ್ಷ ಅಬ್ದುಲ್ ಮಜೀದ್ ಎಸ್. ಉಪಸ್ಥಿತರಿದ್ದರು. ಶಿಕ್ಷಕರಾದ ಮುಹಮ್ಮದ್ ‌ಮುಸ್ತಫಾ, ಮುಹಮ್ಮದ್ ಶರೀಫ್, ಸಂಶಾದ್, ಅಕ್ಬರ್ ಅಲಿ ವಿವಿಧ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮನಾಝಿರ್ ಸ್ವಾಗತಿಸಿ, ಕೋಶಾಧಿಕಾರಿ ಮುಹಮ್ಮದ್ ಶಾಹಿದ್ ಮಂಗಳೂರು ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News