ಭೀಕರ ಬರದ ಕರಿನೆರಳಲ್ಲಿ ಅಫ್ಘಾನಿಸ್ತಾನ: ರೈತರು, ಪಶುಪಾಲಕರ ಪರಿಸ್ಥಿತಿ ದಾರುಣ

Update: 2021-11-21 18:05 GMT

ಕಾಬೂಲ್, ನ.21: ಅಫ್ಘಾನಿಸ್ತಾನಕ್ಕೆ ಭೀಕರವಾದ ಬರಗಾಲದ ಪರಿಸ್ಥಿತಿಯನ್ನು ಎದುರಾಗಿದ್ದು, ಚಳಿಗಾಲ ಸಮೀಪಿಸುತ್ತಿರುವಂತೆಯೇ ಅಲ್ಲಿನ ರೈತರು ಹಾಗೂ ಪಶುಪಾಲಕರ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಲಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ನೆರವು ತಜ್ಞರು ಶನಿವಾರ ಎಚ್ಚರಿಕೆ ನೀಡಿದ್ದಾರೆ.

ಅಫ್ಘಾನಿಸ್ತಾನವು ಪ್ರಸಕ್ತ ಮಾನವೀಯ ನೆರವಿನ ಸೌಲಭ್ಯಗಳ ಕೊರತೆಯಿಂದ ಬಾಧಿತವಾಗಿದೆ. ಅವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿವೆ ಹಾಗೂ ಅಫ್ಘನ್ನರ ಅಗತ್ಯಗಳನ್ನು ಈಡೇರಿಸಲು ಸಂಪನ್ಮೂಲಗಳ ಕೊರತೆ ಎದುರಾಗಿದೆ ಎಂದು ವಿಶ್ವಸಂಸ್ಥೆಯ ಆಹಾರ ಹಾಗೂ ಕೃಷಿ ಸಂಘಟನೆ (ಎಫ್ಎಓ) ವಿವರಿಸಿದೆ.

‘‘ಅಫ್ಘಾನಿಸ್ತಾನದ ಪರಿಸ್ಥಿತಿ ವಿನಾಶಕಾರಿಯಾಗಿದೆ. ನಾವು ಮಾತನಾಡಿಸಿದ ಪ್ರತಿಯೊಬ್ಬ ರೈತನು, ಈ ವರ್ಷ ಹೆಚ್ಚುಕಡಿಮೆ ತಾನು ಬೆಳೆದ ಎಲ್ಲಾ ಬೆಳೆಗಳು ನಾಶಗೊಂಡಿದೆಯೆಂದು ಹೇಳಿದ್ದಾನೆ. ಅವರಲ್ಲಿ ಅನೇಕರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡಿದ್ದಾರೆ. ಅಪಾರವಾದ ಸಾಲವನ್ನು ಮಾಡಿರುವ ಅವರು ಕೈಯಲ್ಲಿ ಕಾಸಿಲ್ಲದೆ ಕಂಗಾಲಾಗಿದ್ದಾರೆ’’ ಎಂದು ಅಫ್ಘಾನಿಸ್ತಾನದಲ್ಲಿನ ಎಫ್ಎಓ ಪ್ರತಿನಿಧಿ ರಿಚಾರ್ಡ್ ಟ್ರೆಂಚಾರ್ಡ್ ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಪ್ರಸಕ್ತ 1.88 ಕೋಟಿ ಜನರಿಗೆ ಪ್ರತಿ ದಿನವೂ ಆಹಾರ ದೊರೆಯಲು ಸಾಧ್ಯವಾಗುತ್ತಿಲ್ಲ ಮತ್ತು ಈ ಸಂಖ್ಯೆಯು ವರ್ಷಾಂತ್ಯದೊಳಗೆ 2.30 ಕೋಟಿಗೆ ಏರಲಿದೆ ಎಂದು ಎಫ್ಎಓ ತಿಳಿಸಿದೆ.

ಈ ಜನರನ್ನು ಹಾಗೂ ಅವರ ಜೀವನೋಪಾಯಗಳನ್ನು ರಕ್ಷಿಸಲು ತಕ್ಷಣವೇ ದೊಡ್ಡ ಮಟ್ಟದ ನೆರವನ್ನು ಒದಗಿಸಲು ಸಾಧ್ಯವಾಗದೆ ಇದ್ದಲ್ಲಿ 2022ರಲ್ಲಿ ಅಫ್ಘಾನಿಸ್ತಾನವು ನೈಜವಾದ ಬರಪರಿಸ್ಥಿತಿಯನ್ನು ಎದುರಿಸಲಿದೆ ಎಂದು ಎಫ್ಎಓ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News