ಮುಟ್ಟುಗೋಲು ಹಾಕಿದ ಸಂಪತ್ತನ್ನು ಬಿಡುಗಡೆಗೊಳಿಸಬೇಕಾದರೆ ಕಾನೂನಿನ ಸಿಂಧುತ್ವವನ್ನು ಸಂಪಾದಿಸಿಕೊಳ್ಳಿ

Update: 2021-11-21 18:37 GMT

ವಾಶಿಂಗ್ಟನ್, ನ.20: ಅಫ್ಘಾನಿಸ್ತಾನದ ಆಡಳಿತವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ತಾನು ಮುಟ್ಟುಗೋಲು ಹಾಕಿರುವ ಅಫ್ಘಾನ್ ಸಂಪತ್ತನ್ನು ಬಿಡುಗಡೆಗೊಳಿಸಲು ಅಮೆರಿಕ ನಿರಾಕರಿಸಿದೆ. ಮುಟ್ಟುಗೋಲು ಹಾಕಲಾದ ಆಸ್ತಿಯನ್ನು ವಾಪಸ್ ಮಾಡಬೇಕಾದರೆ ನೂತನ ತಾಲಿಬಾನ್ ಸರಕಾರವು ಮೊದಲಿಗೆ ಕಾನೂನಿನ ಸಿಂಧುತ್ವವನ್ನು ಪಡೆಯಬೇಕೆಂದು ಅದು ಆಗ್ರಹಿಸಿದೆ.

ಅಫ್ಘಾನಿಸ್ತಾನಕ್ಕಾಗಿನ ಅಮೆರಿಕದ ವಿಶೇಷ ಪ್ರತಿನಿಧಿ ಥಾಮಸ್ ವೆಸ್ಟ್ ಈ ಬಗ್ಗೆ ರವಿವಾರ ಹೇಳಿಕೆಯೊಂದನ್ನು ನೀಡಿದ್ದು, ‘ ತಾಲಿಬಾನ್ ಸೇನಾಬಲವನ್ನು ಬಳಸಿ ಅಧಿಕಾರವನ್ನು ಹಿಡಿದಿದೆಯಾದ್ದರಿಂದ ಅದಕ್ಕೆ ನೀಡುವ ಮಹತ್ವದ ಮಾನವೀಯೇತರ  ನೆರವನ್ನು ನೀಡುವುದನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಭಯೋತ್ಪಾದನೆಯನ್ನು ಹತ್ತಿಕ್ಕಲು ಕ್ರಮಗಳನ್ನು ಕೈಗೊಳ್ಳುವುದು, ಎಲ್ಲರನ್ನೂ ಒಳಗೊಂಡ ಸರಕಾರದ ಸ್ಥಾಪನೆ,ಎಲ್ಲರಿಗೂ ಶಿಕ್ಷಣ ಹಾಗೂ ಉದ್ಯೋಗವಕಾಶಗಳ ಸಮಾನ ಲಭ್ಯತೆ ಸೇರಿದಂತೆ ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ಬಾಲಕಿಯರ ಹಕ್ಕುಗಳಿಗೆ ಗೌರವ ನೀಡುವ ಮೂಲಕ ಅಫ್ಘಾನ್ ಆಡಳಿತವು ಕಾನೂನಿನ ಮಾನ್ಯತೆ ಹಾಗೂ ಬೆಂಬಲವನ್ನು ಸಂಪಾದಿಸಿಕೊಳ್ಳಬೇಕೆಂದು ಅವರು ತಿಳಿಸಿದರು.

ತಾಲಿಬಾನ್ ಬುಧವಾರ ಅಮೆರಿಕ ಕಾಂಗ್ರೆಸ್ಗೆ ಬರೆದ ಬಹಿರಂಗಪತ್ರದಲ್ಲಿ, ಆಗಸ್ಟ್ನಲ್ಲಿ ತಾನು ದೆೀಶದ ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ಮುಟ್ಟುಗೋಲು ಹಾಕಲಾದ ಅಫ್ಘಾನಿಸ್ತಾನದ ಆಸ್ತಿಪಾಸ್ತಿಗಳನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿತ್ತು.

ಅಮೆರಿಕವು ಅಫ್ಘಾನಿಸ್ತಾನದ ಸೆಂಟ್ರಲ್ ಬ್ಯಾಂಕ್ಗೆ ಸೇರಿದ 9.5 ಶತಕೋಟಿ ಡಾಲರ್ ಸಂಪತ್ತನ್ನು ಮುಟ್ಟುಗೋಲು ಹಾಕಿತ್ತು. ಇದರಿಂದಾಗಿ ಕಳೆದ ಹಲವಾರು ವರ್ಷಗಳಿಂದ ವಿದೇಶಿ ನೆರವನ್ನೇ ಅವಲಂಭಿಸಿದ್ದ ಅಫ್ಘಾನಿಸ್ತಾನದ ಆರ್ಥಿಕತೆ ಪತನಗೊಂಡಿತ್ತು. ಬಳಿಕ ತನ್ನ ಹಲವಾರು ಉದ್ಯೋಗಿಗಳಿಗೆ ವೇತನವನ್ನೇ ಪಾವತಿಸಲು ಸಾಧ್ಯವಾಗಲಿಲ್ಲ ಹಾಗೂ ಆಮದಿತ ಸರಕು,ಸಾಮಾಗ್ರಿಗಳಿಗೆ ಹಣವನ್ನು ಪಾವತಿಸಲು ಅಸಮರ್ಥವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News