ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

Update: 2021-11-22 14:41 GMT

ಜೈಪುರ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ತಮ್ಮ ಸಂಪುಟಕ್ಕೆ ಸೇರ್ಪಡೆಗೊಂಡ ಸಚಿವರಿಗೆ ಸೋಮವಾರ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಮುಖ್ಯಮಂತ್ರಿ ಎರಡು ಪ್ರಮುಖ ಖಾತೆಗಳಾದ ಗೃಹ ಹಾಗೂ  ಹಣಕಾಸು ತಮ್ಮಲ್ಲೇ ಉಳಿಸಿಕೊಂಡರು.

ರಾಜಸ್ಥಾನ ಮುಖ್ಯಮಂತ್ರಿ ಕಚೇರಿ (ಸಿಎಂಒ) ನೀಡಿದ ಪಟ್ಟಿಯ ಪ್ರಕಾರ ವಿಶ್ವೇಂದ್ರ ಸಿಂಗ್ ಅವರನ್ನು ರಾಜಸ್ಥಾನದ ಪ್ರವಾಸೋದ್ಯಮ ಸಚಿವರನ್ನಾಗಿ ನೇಮಿಸಲಾಗಿದೆ ಹಾಗೂ  ಮಹೇಶ್ ಜೋಶಿ ಅವರನ್ನು ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಮತ್ತು ಅಂತರ್ಜಲ ಇಲಾಖೆಗೆ ನಿಯೋಜಿಸಲಾಗಿದೆ.

ಭರತ್‌ಪುರದ ಕಾಂಗ್ರೆಸ್ ಶಾಸಕ ವಿಶ್ವೇಂದ್ರ ಸಿಂಗ್ ಅವರು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್‌ಗೆ ಆಪ್ತರು ಎಂದು ಪರಿಗಣಿಸಲಾಗಿದೆ. ಅದೇ ಸಮಯದಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್‌ನ ಮುಖ್ಯ ಸಚೇತಕರಾಗಿರುವ ಮಹೇಶ್ ಜೋಶಿ ಅವರು ಗೆಹ್ಲೋಟ್ ನಿಷ್ಠಾವಂತರಾಗಿ ಗುರುತಿಸಿಕೊಂಡಿದ್ದಾರೆ.

ಏತನ್ಮಧ್ಯೆ ಬಿಕಾನೇರ್ ಶಾಸಕ ಬುಲಾಕಿ ದಾಸ್ ಕಲ್ಲಾ ಅವರನ್ನು ಶಿಕ್ಷಣ ಸಚಿವರನ್ನಾಗಿ ಹಾಗೂ  ಲಾಲ್‌ಚಂದ್ ಕಟಾರಿಯಾ ಅವರನ್ನು ಕೃಷಿ, ಪಶುಸಂಗೋಪನೆ ಹಾಗೂ  ಮೀನುಗಾರಿಕೆ ಸಚಿವರನ್ನಾಗಿ ಮಾಡಲಾಗಿದೆ.

ಪ್ರಮೋದ್ ಅವರಿಗೆ ಗೋಪಾಲನ್ (ಗೋಸಾಕಣೆ) ಮತ್ತು ಗಣಿ ಮತ್ತು ಪೆಟ್ರೋಲಿಯಂ ಇಲಾಖೆಗಳನ್ನು ನೀಡಲಾಗಿದೆ.

ಕೋಟಾ-ಉತ್ತರ ಕ್ಷೇತ್ರದ ಶಾಸಕ ಶಾಂತಿ ಧರಿವಾಲ್ ಅವರು ಸಂಸದೀಯ ವ್ಯವಹಾರಗಳ ಖಾತೆಯನ್ನು ಉಳಿಸಿಕೊಂಡರೆ, ಶಾಸಕ ಸಲೇಹ್ ಮುಹಮ್ಮದ್ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆಯನ್ನು ಉಳಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News