ಟ್ವೆಂಟಿ-20 ಕ್ರಿಕೆಟ್ ನಲ್ಲಿ ಗರಿಷ್ಠ 50 ಪ್ಲಸ್ ಸ್ಕೋರ್: ವಿರಾಟ್ ಕೊಹ್ಲಿ ದಾಖಲೆ ಮುರಿದ ರೋಹಿತ್ ಶರ್ಮಾ

Update: 2021-11-22 15:37 GMT

ಕೋಲ್ಕತಾ: ನ್ಯೂಝಿಲ್ಯಾಂಡ್ ವಿರುದ್ಧದ ಮೂರನೇ ಹಾಗೂ  ಕೊನೆಯ ಟ್ವೆಂಟಿ-20 ಅಂತರಾಷ್ಟ್ರೀಯ ಪಂದ್ಯದಲ್ಲಿ ಮತ್ತೊಂದು ಅರ್ಧಶತಕದ ಕೊಡುಗೆ ನೀಡಿದ ರೋಹಿತ್ ಶರ್ಮಾ 'ಸರಣಿ ಶ್ರೇಷ್ಠ' ಗೌರವಕ್ಕೆ ಪಾತ್ರರಾದರು.

ಅದಾಗಲೇ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದ ಕಾರಣ ಟಾಸ್ ಜಯಿಸಿದ್ದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಿ ತಂಡದ ಸಾಮರ್ಥ್ಯವನ್ನು ಪರೀಕ್ಷಿಸಲು ನಿರ್ಧರಿಸಿದರು. 31 ಎಸೆತಗಳಲ್ಲಿ 56 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ  ಹಾಕಿಕೊಟ್ಟರು.

 ರೋಹಿತ್ ಮೂರು ಪಂದ್ಯಗಳ ಸರಣಿಯಲ್ಲಿ ಒಟ್ಟು 159 ರನ್‌ ಗಳಿಸಿ ಗರಿಷ್ಠ ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು. ಸರಣಿಯಲ್ಲಿ  ಎರಡು ಅರ್ಧ ಶತಕಗಳನ್ನು ಗಳಿಸಿರುವ ರೋಹಿತ್ ಟ್ವೆಂಟಿ-20ಯಲ್ಲಿ  ಒಟ್ಟು  26  ಅರ್ಧಶತಕ ಗಳಿಸಿದ ಸಾಧನೆ ಮಾಡಿದರು. 4 ಶತಕಗಳನ್ನು ಸೇರಿಸಿ ರೋಹಿತ್ ಈಗ ಟಿ-20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 30 ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿದ್ದಾರೆ.

ಟ್ವೆಂಟಿ-20 ಗಳಲ್ಲಿ 29 ಅರ್ಧಶತಕಗಳನ್ನು ಗಳಿಸಿರುವ ತಂಡದ ಸಹ ಆಟಗಾರ ವಿರಾಟ್ ಕೊಹ್ಲಿಯವರನ್ನು ಮೀರಿಸಿದರು ಹಾಗೂ  ಈಗ ಟಿ-20 ಮಾದರಿ ಕ್ರಿಕೆಟ್ ನಲ್ಲಿ ಹೆಚ್ಚು 50 ಪ್ಲಸ್ ಸ್ಕೋರ್‌ ಗಳಿಸಿ ಬ್ಯಾಟ್ಸ್‌ಮನ್‌ಗಳ ಗಣ್ಯರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

 ಪಾಕಿಸ್ತಾನದ ಬಾಬರ್ ಆಝಮ್ ಅವರು 25 ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿದ್ದಾರೆ. ಆ ನಂತರ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಹಾಗೂ ನ್ಯೂಝಿಲ್ಯಾಂಡ್ ನ ಮಾರ್ಟಿನ್ ಗಪ್ಟಿಲ್ ಅವರು 22 ಫಿಫ್ಟಿ ಪ್ಲಸ್ ಸ್ಕೋರ್‌ಗಳೊಂದಿಗೆ ಸಮಬಲದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News