ನಿಗೂಢ ಹೈಪರ್‌ಸಾನಿಕ್ ಅಸ್ತ್ರ ಪರೀಕ್ಷಿಸಿದ ಚೀನಾ

Update: 2021-11-22 18:37 GMT

ಬೀಜಿಂಗ್, ನ.22: ಜುಲೈಯಲ್ಲಿ ಚೀನಾವು ಅಸಾಮಾನ್ಯ ಸಾಮರ್ಥ್ಯದ ನಿಗೂಢ ಹೈಪರ್‌ಸಾನಿಕ್ ಅಸ್ತ್ರವನ್ನು ಪರೀಕ್ಷಿಸಿದ್ದು , ಇದು ಶಬ್ದದ ವೇಗಕ್ಕಿಂತ 5 ಪಟ್ಟು ವೇಗದಲ್ಲಿ ಚಲಿಸಿ ಉದ್ದೇಶಿತ ಗುರಿ ತಲುಪಿದೆ. ಚೀನಾದ ಈ ಕ್ರಮ ಅಮೆರಿಕದ ರಕ್ಷಣಾ ಇಲಾಖೆಯನ್ನು ಅಚ್ಚರಿಯಲ್ಲಿ ಕೆಡವಿದೆ ಎಂದು ‘ದಿ ಫೈನಾನ್ಶಿಯಲ್ ಟೈಮ್ಸ್’ ವರದಿ ಮಾಡಿದೆ. ಆದರೆ ಈ ಅಸ್ತ್ರ ಯಾವುದು ಎಂದು ಇದುವರೆಗೂ ತಿಳಿದು ಬಾರದೆ ಗೊಂದಲ ಉಂಟಾಗಿದೆ ಎಂದು ಗುಪ್ತಚರ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. ಕೆಲವು ಮಿಲಿಟರಿ ತಜ್ಞರ ಪ್ರಕಾರ, ಆಕಾಶದಿಂದ ಆಕಾಶಕ್ಕೆ ಉಡಾಯಿಸುವ ಕ್ಷಿಪಣಿಯನ್ನು ಪ್ರಯೋಗಿಸಲಾಗಿದೆ. ಇತರ ಕೆಲವರ ಪ್ರಕಾರ, ಇದು ಇತರ ದೇಶಗಳ ಹೈಪರ್‌ಸಾನಿಕ್ ಕ್ಷಿಪಣಿಯನ್ನು ಧ್ವಂಸಗೊಳಿಸುವ ಸಾಮರ್ಥ್ಯದ ಪ್ರತಿಬಂಧಕ ವ್ಯವಸ್ಥೆಯಾಗಿದೆ. ಯುದ್ಧದ ಸಂದರ್ಭ ಪರಮಾಣು ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಚೀನಾವು ಹೈಪರ್‌ಸಾನಿಕ್ ಅಸ್ತ್ರದ ಪರೀಕ್ಷೆ ನಡೆಸಿರುವುದು ನಿಜವಾದರೆ, ಚೀನಾವು ಕಕ್ಷೆಯ ಮೂಲಕ ಎದುರಾಳಿಯ ಮೇಲೆ ದಾಳಿ ನಡೆಸುವ ಅತ್ಯಾಧುನಿಕ ವ್ಯವಸ್ಥೆ ರೂಪಿಸುತ್ತಿದೆ ಎಂಬ ವರದಿಗೆ ಪುಷ್ಟಿ ದೊರಕುತ್ತದೆ. ಅಮೆರಿಕವು ಖಂಡಾಂತರ ಕ್ಷಿಪಣಿಗಳನ್ನು ಪ್ರತಿಬಂಧಿಸಿ ಧ್ವಂಸಗೊಳಿಸುವ ವ್ಯವಸ್ಥೆ ಹೊಂದಿದ್ದರೆ, ಅದಕ್ಕಿಂತ ಒಂದು ಹೆಜ್ಜೆ ಮುಂದೆ ಸಾಗಿ, ಕಕ್ಷೆಯನ್ನು ಬಳಸಿಕೊಂಡು ಸೂಪರ್‌ಸಾನಿಕ್ ಕ್ಷಿಪಣಿಗಳನ್ನು ಧ್ವಂಸಗೊಳಿಸುವ ವ್ಯವಸ್ಥೆಯನ್ನು ಚೀನಾ ರಹಸ್ಯವಾಗಿ ಅಭಿವೃದ್ಧಿಪಡಿಸಿರುವ ಸಾಧ್ಯತೆಯಿದೆ ಎಂದು ಪತ್ರಿಕೆಯ ವರದಿ ಹೇಳಿದೆ. ಆದರೆ ಹೈಪರ್‌ಸಾನಿಕ್ ಕ್ಷಿಪಣಿ ಧ್ವಂಸ ವ್ಯವಸ್ಥೆ ಇದಾಗಿರುವ ಸಾಧ್ಯತೆಯಿಲ್ಲ . ಬಹುಷಃ ಇದು ಯುದ್ಧಕ್ಷೇತ್ರದಲ್ಲಿ ಬಳಕೆಯಾಗುವ ಬೆಂಬಲ ಕಾರ್ಯವಿಧಾನ ಆಗಿರಬಹುದು ಎಂದು ವಾಷಿಂಗ್ಟನ್ನ ‘ಕಾರ್ನಿಗಿ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್’ನ ಹಿರಿಯ ಸಂಶೋಧಕ ಅಂಕಿತ್ ಪಾಂಡ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News