ಮಧ್ಯಪ್ರದೇಶದಲ್ಲಿ ಇಪ್ಪೆ 'ಪಾರಂಪರಿಕ ಮದ್ಯ’ ಇನ್ನು ಕಾನೂನುಬದ್ಧ

Update: 2021-11-23 04:14 GMT

ಭೋಪಾಲ್: ಮಹೂವಾ (ಇಪ್ಪೆ) ದಿಂದ ತಯಾರಿಸುವ ಮದ್ಯವನ್ನು ಮಧ್ಯಪ್ರದೇಶ ಸರ್ಕಾರ ಕಾನೂನು ಬದ್ಧಗೊಳಿಸಲು ನಿರ್ಧರಿಸಿದ್ದು, ಹೊಸ ಅಬ್ಕಾರಿ ನೀತಿಯಲ್ಲಿ ಈ ಅಂಶ ಸೇರಲಿದೆ.

ಈ ಪೇಯವನ್ನು "ಪಾರಂಪರಿಕ ಮದ್ಯ" ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ರಾಜ್ಯ ಸರ್ಕಾರ ಹೊಸ ಅಬ್ಕಾರಿ ನೀತಿಯನ್ನು ರೂಪಿಸುತ್ತಿದ್ದು, ಇದರ ಅನ್ವಯ ಬುಡಕಟ್ಟು ಸಮುದಾಯದವರು ಇಪ್ಪೆಯಿಂದ ಪಾರಂಪರಿಕ ಮದ್ಯ ತಯಾರಿಸಲು ಅನುಮತಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೋಮವಾರ ಪ್ರಕಟಿಸಿದ್ದಾರೆ.

ಈ ಪಾರಂಪರಿಕ ಮದ್ಯ ಮಾರಾಟದ ಹಕ್ಕನ್ನು ಕೂಡಾ ಬುಡಕಟ್ಟು ಜನಾಂಗದವರಿಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಬುಡಕಟ್ಟು ಜನಾಂಗದವರು ಸಮುದಾಯ ಅರಣ್ಯಗಳನ್ನು ನಿರ್ವಹಿಸುವ ಹಕ್ಕನ್ನು ನೀಡಲಾಗುವುದು. ಅವರು ಅರಣ್ಯ ಬೆಳೆಸಲು ಮತ್ತು ಆ ಅರಣ್ಯದ ಮರ ಮತ್ತು ಹಣ್ಣಿನ ಮೇಲೆ ಅವರು ಹಕ್ಕು ಹೊಂದಲು ಅವಕಾಶ ನೀಡಲಾಗುವುದು. ಮುಖ್ಯಮಂತ್ರಿ ಐಶ್ವರ ಭೂ- ಅಧಿಕಾರ್ ಯೋಜನೆ ಅನ್ವಯ ವಸತಿ ಭೂಮಿಯ ಹಕ್ಕನ್ನು ಅವರಿಗೆ ಒದಗಿಸಲಾಗುವುದು ಎಂದು ಸಿಎಂ ಹೇಳಿದರು.

ರಾಜ್ಯದ 89 ಬುಡಕಟ್ಟು ಅಭಿವೃದ್ಧಿ ಬ್ಲಾಕ್‌ಗಳಲ್ಲಿ ಈಗಾಗಲೇ ’ರೇಷನ್ ಆಯ್ಕೆ ಗಾಂವ್’ ಯೋಜನೆ ಜಾರಿಗೊಳಿಸಲಾಗಿದೆ. ಇದರ ಅನ್ವಯ ಗ್ರಾಮಗಳಲ್ಲೇ ವಾಹನಗಳ ಮೂಲಕ ಪಡಿತರ ವಿತರಿಸಲಾಗುತ್ತದೆ. ಪಡಿತರ ವಿತರಣೆ ವಾಹನಗಳನ್ನು ಖರೀದಿಸಲು ಬುಡಕಟ್ಟು ಯುವಕರಿಗೆ ಬ್ಯಾಂಕ್ ಮೂಲಕ ಸಾಲ ವಿತರಿಸಿ ಅದಕ್ಕೆ ಖಾತರಿಯನ್ನು ಸರ್ಕಾರವೇ ಒದಗಿಸಲಿದೆ. ಸರ್ಕಾರದಿಂದಲೂ ಸ್ವಲ್ಪ ಹಣ ಒದಗಿಸಲಾಗುತ್ತದೆ. ಪ್ರತಿ ವಾಹನಕ್ಕೆ ಸರ್ಕಾರ ಪ್ರತಿ ತಿಂಗಳು 26 ಸಾವಿರ ರೂಪಾಯಿ ಬಾಡಿಗೆ ನೀಡಲಿದೆ ಎಂದು ವಿವರ ನೀಡಿದರು.

ಬುಡಕಟ್ಟು ಜನರ ವಿರುದ್ಧ ಇರುವ ಸುಳ್ಳು ಹಾಗೂ ಸಣ್ಣ ಪುಟ್ಟ ಪ್ರಕರಣಗಳನ್ನು ವಾಪಾಸು ಪಡೆಯಲಾಗುವುದು. ಬುಡಕಟ್ಟು ಜನಾಂಗದವರು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ಉಚಿತವಾಗಿ ಮರಳು ಒದಗಿಸಲಾಗುವುದು. ಇದರ ಜತೆಗೆ ಮುಂದಿನ ವರ್ಷದಿಂದ ತೆಂಡು ಎಲೆಗಳನ್ನು ಮಾರಾಟ ಮಾಡುವ ಹಕ್ಕನ್ನು ಬುಡಕಟ್ಟು ಜನಾಂಗದವರಿಗೆ ಮಂಜೂರು ಮಾಡುವ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಈ ಕೆಲಸವನ್ನು ಅರಣ್ಯ ಸಮಿತಿಗಳ ಮೂಲಕ ಮಾಡಲಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News