ನ.26-28: ಕೃಷ್ಣಾಪುರದಲ್ಲಿ ಎಸ್ಸೆಸ್ಸೆಫ್ ರಾಜ್ಯ ಪ್ರತಿಭೋತ್ಸವ

Update: 2021-11-23 09:18 GMT

ಮಂಗಳೂರು, ನ.23: ಕರ್ನಾಟಕ ರಾಜ್ಯ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ನ. 26ರಿಂದ 28ರವರೆಗೆ ಕೃಷ್ಣಾಪುರದಲ್ಲಿ ರಾಜ್ಯ ಪ್ರತಿಭೋತ್ಸವವನ್ನು ಆಯೋಜಿಸಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾ ಮಟ್ಟದ ವಿಜೇತ ವಿದ್ಯಾರ್ಥಿಗಳು ಈ ಪ್ರತಿಭೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಸುಮಾರು 700 ಮಂದಿ ಪ್ರತಿಭಾನ್ವಿತರು 70 ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಪ್ರತಿಭೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ ಅಲ್‌ಹಾಜ್ ಬಿ.ಎಂ. ಮುಮ್ತಾಝ್ ಅಲಿ ಕೃಷ್ಣಾಪುರ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ನ. 26ರಂದು 3 ಗಂಟೆಗೆ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆಸಿರೋಡ್ ಹುಸೈನ್ ಸಅದಿ ಚಾಲನೆ ನೀಡಲಿದ್ದಾರೆ. ಮಗ್ರಿಬ್ ನಮಾಝ್ ಬಳಿಕ ವಿಜೇತ ತಂಡಗಳ ಆಕರ್ಷಕ ಬುರ್ದಾ ಸ್ಪರ್ಧೆ ನಡೆಯಲಿದೆ. ರಾತ್ರಿ 9 ಗಂಟೆಗೆ ನಸ್ ಅಮಾನಿ ಕೇರಳ ಅವರು ಪ್ರಭಾಷಣ ನೀಡಲಿದ್ದಾರೆ.

ನ. 27ರಂದು ಬೆಳಗ್ಗೆ 10 ಗಂಟೆಗೆ ಗಣ್ಯರ ಸಮಾವೇಶ ನಡೆಯಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ. ಯಡಪಡಿತ್ತಾಯ ಉದ್ಘಾಟನೆ ನೆರವೇರಿಸುವರು. ಕಾರ್ಯಕ್ರಮದಲ್ಲಿ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬರನ್ನು ಸನ್ಮಾನಿಸಲಾಗುವುದು. ರಾತ್ರಿ 7 ಗಂಟೆಗೆ ದಫ್ ಕಾರ್ಯಕ್ರಮ ನಡೆಯಲಿದೆ.

ನ. 28ರಂದು ಬೆಳಗ್ಗೆ 10 ಗಂಟೆಗೆ ಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ರಾಜ್ಯ ಉಲಮಾ ಒಕ್ಕೂಟದ ಅಧ್ಯಕ್ಷ ಮಾಣಿ ಉಸ್ತಾದ್ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಅವರನ್ನು ಸನ್ಮಾನಿಸಲಾಗುವುದು.

ದ.ಕ. ಜಿಲ್ಲೆಯ ಕಸಪಾ ನೂತನ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಯ್ಯಿದ್ ಹಬೀಬುಲ್ಲಾಹ್ ತಂಙಳ್‌ರವರಿಗೆ ಸುನ್ನಿ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದ ವಿವಿಧ ವೇದಿಕೆಗಳಲ್ಲಿ ಕೃಷ್ಣಾಪುರ ಬದ್ರಿಯಾ ಮಸೀದಿ ಸಂಯುಕ್ತ ಖಾಝಿ ಅಲ್‌ಹಾಜ್ ಇ.ಕೆ. ಇಬ್ರಾಹೀಂ ಮುಸ್ಲಿಯಾರ್, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ ಬೊಳ್ಳಾಜೆ, ಕಾರ್ಪೊರೇಟರ್‌ಗಳಾದ ಸಂಶಾದ್ ಅಬೂಬಕ್ಕರ್, ಲಕ್ಷ್ಮೀ ದೇವಾಡಿಗ, ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಾ. ಶೇಖ್ ಬಾವಾ, ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುರ್ರಶೀದ್ ಝೈನಿ ಕಾಮಿಲ್, ಎಸ್‌ಜೆಎಂ ರಾಜ್ಯಾಧ್ಯಕ್ಷ ಅಬ್ದುರ್ರಹ್ಮಾನ್ ಮದನಿ ಜೆಪ್ಪು ಹಾಗೂ ಸ್ಥಳೀಯ ಜಮಾಅತ್‌ಗಳ ಅಧ್ಯಕ್ಷರು, ಧಾರ್ಮಿಕ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

ಗೋಷ್ಠಿಯಲ್ಲಿ ರಾಜ್ಯ ಪ್ರತಿಭೋತ್ಸವ ಸಮಿತಿಯ ಅಧ್ಯಕ್ಷ ಕೆ.ಎಂ. ಮುಸ್ತಫಾ ನಈಮಿ ಹಾವೇರಿ, ಎಸ್‌ಎಸ್‌ಎಫ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಕೋಶಾಧಿಕಾರಿ ಹಾಫಿಝ್ ಸುಫ್ಯಾನ್ ಸಖಾಫಿ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಹಾಜಿ ಪ್ರಿಂಟೆಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News