ಬೆಳ್ತಂಗಡಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಜಬ್ಬರಿಗೆ ಸನ್ಮಾನ

Update: 2021-11-23 10:07 GMT

ಬೆಳ್ತಂಗಡಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರಿಗೆ ‘ಹಾಜಬ್ಬ ಅಭಿನಂದನಾ ಸಮಿತಿ’ ಬೆಳ್ತಂಗಡಿ ಇದರ ವತಿಯಿಂದ ಬೆಳ್ತಂಗಡಿ ಜನತೆಯ ಪರವಾಗಿ ಅಭಿನಂದನಾ ಸಮಾರಂಭವು ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ಮಂಗಳವಾರ ಜರುಗಿತು.

'ಬದುಕು ಕಟ್ಟೋಣ ಬನ್ನಿ' ತಂಡ ಉಜಿರೆ ಹಾಗೂ ರೋಟರಿ ಕ್ಲಬ್ ಉಜಿರೆ ಇದರ ಸಹಭಾಗಿತ್ವದಲ್ಲಿ ನಡೆದ ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಿದ್ದರು. ನಂತರ ಮಾತನಾಡಿದ ಅವರು, ಹಾಜಬ್ಬ ಅಭಿನಂದನಾ ಸಮಿತಿಯಿಂದ ಹರೇಕಳ ಶಾಲೆಗೆ ಒಂದು ಶಾಲಾ ಕೊಠಡಿ ನಿರ್ಮಾಣ ಕಾರ್ಯಕ್ಕೆ 5 ಲಕ್ಷ ಸಹಾಯಧನ ಹಾಗೂ ಬದುಕು ಕಟ್ಟೋಣ ಬನ್ನಿ ತಂಡ ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಶಾಲೆಗೆ 20 ಸಾವಿರ ಮೌಲ್ಯದ ಕ್ರೀಡಾ ಸಾಮಗ್ರಿಗಳು ಮತ್ತು 80 ಸಾವಿರ ರೂ. ಮೌಲ್ಯದ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಹಾಜಬ್ಬರನ್ನು ಅಭಿನಂದಿಸುತ್ತಿರುವುದಾಗಿ ತಿಳಿಸಿದರು.

ಇದೇ ವೇಳೆ ಕಾಲೇಜು ವಿದ್ಯಾರ್ಥಿಗಳು ಹರೇಕಳ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಹಾಜಬ್ಬರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹರೇಕಳ ಹಾಜಬ್ಬ ಇದೊಂದು ಅಪರೂಪದ ಅಭಿನಂದನೆಯಾಗಿದೆ. ಎಂದಿಗೂ ಇದನ್ನು ಮರೆಯಲು ಸಾಧ್ಯವಿಲ್ಲ ಎಂದರು. ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಅಭಿನಂದನಾ ಭಾಷಣ ಮಾಡಿದರು. ಉಜಿರೆ ಶ್ರೀ ಧ.ಮಂ ಪದವಿ ಕಾಲೇಜು ಪ್ರಾಂಶುಪಾಲ ಡಾ. ಸತೀಶ್ಚಂದ್ರ, ಮಡಂತ್ಯಾರು ಸೇಕ್ರೆಡ್ ಹಾರ್ಟ್  ಪದವಿ ಕಾಲೇಜು ಪ್ರಾಂಶುಪಾಲ ಡಾ. ಎಂ.ಎನ್ ಜೋಸೆಫ್, ಬೆಳ್ತಂಗಡಿ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಆಂಟೊನಿ,  ಉಜಿರೆ ಗ್ರಾ.ಪಂ ಅಧ್ಯಕ್ಷೆ  ಪುಷ್ಪಾವತಿ ಆರ್ ಶೆಟ್ಟಿ, ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ, ಮೋಹನ್ ಕುಮಾರ್,  ರಾಜೇಶ್ ಪೈ, ಬೆಳ್ತಂಗಡಿ ರೋಟರಿ ಕ್ಲಬ್  ಕಾರ್ಯದರ್ಶಿ ಅಬೂಬಕ್ಕರ್, ಪುಂಜಾಲಕಟ್ಟೆ ಕಾಲೇಜು ಪ್ರೊಫೆಸರ್ ಸುಮಂತ್, ಮೊದಲಾದ  ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು, ರೋಟರಿ ಕ್ಲಬ್ ಸದಸ್ಯರು, ಹಾಜಬ್ಬ ಅಭಿಮಾನಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News