×
Ad

​ಹರೇಕಳ ಹಾಜಬ್ಬರ ಹೆಣ್ಮಕ್ಕಳ ಮದುವೆಗೆ ನೆರವು: ಮುಹಮ್ಮದ್ ಮಸೂದ್

Update: 2021-11-23 17:29 IST

ಮಂಗಳೂರು, ನ.23: ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡುವ ಮೂಲಕ ದೇಶ ವಿದೇಶಗಳಲ್ಲಿ ಹರೇಕಳ ಹಾಜಬ್ಬ ಮನೆಮಾತಾಗಿದ್ದಾರೆ. ಆದರೆ ಅವರ ಕೌಟುಂಬಿಕ ಜೀವನ ಆಶಾದಾಯಕವಾಗಿಲ್ಲ. ಅವರ ಪತ್ನಿ ಅನಾರೋಗ್ಯಪೀಡಿತರಾಗಿದ್ದಾರೆ. ಇಬ್ಬರು ಹೆಣ್ಮಕ್ಕಳಿಗೆ ಮದುವೆಯಾಗುವ ವಯಸ್ಸಾಗಿದೆ. ಬಿಡುವಿಲ್ಲದ ಸಮಯದ ಮಧ್ಯೆಯೂ ಹಾಜಬ್ಬರು ತನ್ನ ಹೆಣ್ಣು ಮಕ್ಕಳಿಗಾಗಿ ಸೂಕ್ತ ವರರ ತಲಾಶೆಯಲ್ಲಿದ್ದಾರೆ. ಒಂದು ವೇಳೆ ಹಾಜಬ್ಬರ ಇಬ್ಬರು ಹೆಣ್ಮಕ್ಕಳಿಗೆ ಮದುವೆ ನಿಶ್ಚಯವಾದರೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಹೇಳಿದರು.

ಮುಸ್ಲಿಂ ಸೆಂಟ್ರಲ್ ಕಮಿಟಿಯ ವತಿಯಿಂದ ಕುದ್ರೋಳಿಯ ತನ್ನ ಸ್ವಗೃಹದಲ್ಲಿ ಮಂಗಳವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಹರೇಕಳ ಹಾಜಬ್ಬರಿಗೆ 50 ಸಾವಿರ ರೂ.ನ ಚೆಕ್ ನೀಡಿ ಶಾಲು ಹೊದಿಸಿ ಸನ್ಮಾನಿಸಿ ಅವರು ಮಾತನಾಡಿದರು.

ದೇಶದ ನಾಲ್ಕನೇ ಅತ್ಯುನ್ನತ ಪ್ರಶಸ್ತಿಗೆ ಪಾತ್ರರಾಗಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಸಮಾಜಕ್ಕೆ, ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಒಬ್ಬ ಜನಸಾಮಾನ್ಯನನ್ನು ಅಲ್ಲಾಹನು ಹೇಗೆ ಎತ್ತರದ ಸ್ಥಾನಕ್ಕೇರಿಸುತ್ತಾನೆ ಎಂಬುದಕ್ಕೆ ಹರೇಕಳ ಹಾಜಬ್ಬ ಸಾಕ್ಷಿಯಾಗಿದ್ದಾರೆ. ತಾನು ಎಲ್‌ಐಸಿ ಉದ್ಯೋಗಿಯಾಗಿದ್ದಾಗಲೂ ಹಾಜಬ್ಬ ಅವರನ್ನು ಕಂಡುಬಲ್ಲೆ. ಅಂದಿನ ಅವರ ಸರಳ ವ್ಯಕ್ತಿತ್ವವು ಇಂದೂ ಇದೆ. ಹಾಗಾಗಿ ಯುವಕರು ಹಾಜಬ್ಬರಿಂದ ಸ್ಪೂರ್ತಿ ಪಡೆದು ಸಮಾಜಕ್ಕೆ ಕಿಂಚಿತ್ತಾದರೂ ಕೊಡುಗೆ ನೀಡಲು ಮುಂದೆ ಬರಬೇಕು ಎಂದು ಮುಹಮ್ಮದ್ ಮಸೂದ್ ಹೇಳಿದರು.

ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ಸಂಶುದ್ದೀನ್ ಕುದ್ರೋಳಿ, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್.ಅಬ್ದುಲ್ ಖಾದರ್, ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಯಹ್ಯಾ ನಖ್ವ, ಕುದ್ರೋಳಿ ಜಾಮಿಯಾ ಮಸ್ಜಿದ್‌ನ ಉಪಾಧ್ಯಕ್ಷ ಯೂಸುಫ್ ಖರ್ದಾರ್, ಡಾ.ಆರೀಫ್ ಮಸೂದ್, ಕಾರ್ಯದರ್ಶಿಗಳಾದ ಡಿ.ಎಂ. ಅಸ್ಲಂ, ಸಿಎಂ ಹನೀಫ್, ಸಿಎಂ ಮುಸ್ತಫಾ, ಮಜೀದ್ ಪಿಪಿ, ಮಾಜಿ ಕಾರ್ಪೊರೇಟರ್ ಬಿ. ಅಬೂಬಕರ್ ಕುದ್ರೋಳಿ, ಸಂಶುದ್ದೀನ್ ಬಂದರ್, ಅಹ್ಮದ್ ಬಾವಾ ಬಜಾಲ್, ರಿಯಾಝುದ್ದೀನ್ ಬಂದರ್ ಮತ್ತಿತರರು ಉಪಸ್ಥಿತರಿದ್ದರು.

ಕುದ್ರೋಳಿ ಜಾಮಿಯಾ ಮಸ್ಜಿದ್‌ನ ಖತೀಬ್ ಮೌಲಾನಾ ಝುಬೈರ್ ದುಆಗೈದರು. ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಬಂದರ್ ಸನ್ಮಾನ ಪತ್ರ ವಾಚಿಸಿದರು. ಉಪಾಧ್ಯಕ್ಷ ಮುಮ್ತಾಝ್ ಅಲಿ ಕೃಷ್ಣಾಪುರ ವಂದಿಸಿದರು. ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News