ಮಳೆ ಹಾನಿಗೆ ತಕ್ಷಣ ಪರಿಹಾರ ನೀಡಿ: ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್

Update: 2021-11-23 12:45 GMT

ಮಂಗಳೂರು: ಮಳೆ ಹಾನಿಯಿಂದ ರಾಜ್ಯದಲ್ಲಿ ಅಪಾರ ಪ್ರಮಾಣದ ಬೆಳೆ ಹಾಗೂ ಇತರ ಸೊತ್ತುಗಳು ಹಾನಿಗೀಡಾಗಿದೆ. ಈ ಬಗ್ಗೆ ಸರಕಾರ ತುರ್ತು ಗಮನಹರಿಸಿ ಮಳೆಹಾನಿ ಪರಿಹಾರ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.

ಸರಕಾರ 2020ರಲ್ಲಿ ಆಗಿರುವ ಮಳೆ ಹಾನಿಗೆ ಇದುವರೆಗೆ ಪರಿಹಾರ ನೀಡಿಲ್ಲ. ಈ ನಡುವೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಗುತ್ತಿಗೆದಾರರು ತಾವು ಕಾಮಗಾರಿ ನಡೆಸಬೇಕಾದರೆ ಶೇ.40  ಕಮಿಷನ್ ನೀಡಬೇಕಾದ ಪರಿಸ್ಥಿತಿ ರಾಜ್ಯದ ಬಿಜೆಪಿ ಆಡಳಿತ ಯಾವ ರೀತಿ ಇದೆ ಎನ್ನುವುದನ್ನು ತೋರಿಸುತ್ತದೆ ಎಂದರು.

ಜಿಲ್ಲಾಧಿಕಾರಿಗೆ, ಪೊಲೀಸರಿಗೆ ಬೆದರಿಕೆ ಹಾಕುವ ಹಾಗೂ ಸಾರ್ವಜನಿಕವಾಗಿ  ಕೊಲೆ ಬೆದರಿಕೆ ಹಾಕುವ ಸಂಘಟನೆಗಳ ಬಗ್ಗೆ ಸ್ವಯಂ ಪ್ರೇರಿತರಾಗಿ ಪೊಲೀಸರು ಪ್ರಕರಣ ದಾಖಲಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹರೀಶ್ ಕುಮಾರ್ ಆಗ್ರಹಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಪರಾಭವದ ಭೀತಿ ಉಂಟಾಗಿರುವ ಹಿನ್ನೆಲೆಯಲ್ಲಿ ಕೃಷಿ ಕಾಯಿದೆಯನ್ನು ಹಿಂತೆಗೆದುಕೊಳ್ಳುವ ಹೇಳಿಕೆಯನ್ನು ಪ್ರಧಾನಿ ನೀಡಿದ್ದಾರೆ. ಆದರೆ ಅಧಿಕೃತವಾಗಿ ಈ ಬಗ್ಗೆ ಇನ್ನೂ ಸಂಸತ್ ನಲ್ಲಿ ಮಂಡಿಸುವ ಕ್ರಮ ಆಗಿಲ್ಲ. ರೈತರ ಪ್ರತಿಭಟನೆ ಇನ್ನೂ ಅಂತ್ಯ ಆಗಿಲ್ಲ. ಬಿಜೆಪಿ ಮುಖಂಡರು ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ. ರೈತರು ಬಿಜೆಪಿಯ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಹರೀಶ್ ಕುಮಾರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಅಭ್ಯರ್ಥಿಯಾಗಿ ಮಂಜುನಾಥ ಭಂಡಾರಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಹರೀಶ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜುನಾಥ ಭಂಡಾರಿ, ಶಾಹುಲ್ ಹಮೀದ್, ಲಾರೆನ್ಸ್, ನೀರಜ್ ಪಾಲ್, ಸದಾಶಿವ ಉಳ್ಳಾಲ್, ಶುಭೋದಯ ಆಳ್ವ ,ಅಲ್ತಾಫ್, ಪ್ರಕಾಶ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News