ಪಡುಬಿದ್ರಿ: ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು
Update: 2021-11-23 19:26 IST
ಪಡುಬಿದ್ರಿ: ಕೌಟುಂಬಿಕ ಕಲಹದಿಂದ ಮನನೊಂದು ಕಳೆದ ಶುಕ್ರವಾರ ಪಡುಬಿದ್ರಿ ಕಡಲ ಕಿನಾರೆಯಲ್ಲಿ ವಿಷ ಸೇವಿಸಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಕಾರ್ಕಳ ತಾಲ್ಲೂಕಿನ ಕಲ್ಯ ಗ್ರಾಮದ ನಿವಾಸಿ ಉದಯ್(35) ಎಂದು ಗುರುತಿಸಲಾಗಿದೆ. ವಿದೇಶದಲ್ಲಿ ಕೆಲಸದಲ್ಲಿದ್ದು ಕೊರೋನ ಕಾರಣದಿಂದ ಇವರು ಕಳೆದ ವರ್ಷ ಊರಿಗೆ ಹಿಂದಿರುಗಿದ್ದರು.
ಕೌಟುಂಬಿಕ ಕಲಹದಿಂದ ಮನನೊಂದು ವಿಷ ಸೇವಿಸಿದ್ದರು ಎನ್ನಲಾಗಿದೆ. ಅಸ್ವಸ್ಥರಾಗಿದ್ದ ಉದಯ್ ಅವರನ್ನು ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.