25ರಂದು ‘ಎಪ್ಪತ್ತು ತಿರುಗಾಟಗಳು’ ಕೃತಿ ಬಿಡುಗಡೆ

Update: 2021-11-23 17:56 GMT

ಮಂಗಳೂರು, ನ.23: ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ ಅವರ ‘ಎಪ್ಪತ್ತು ತಿರುಗಾಟಗಳು’ ಕೃತಿ ನ.25ರಂದು ಮಧ್ಯಾಹ್ನ 2.30ಕ್ಕೆ ನಗರದ ಸಂತ ಅಲೋಶಿಯಸ್ ಕಾಲೇಜು ಎಲ್‌ಸಿಆರ್‌ಐ ಬ್ಲಾಕ್‌ನ ಎಲ್‌ಎಫ್ ರಸ್ಕಿನ್ಹ ಸಭಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ.

ವಿಶ್ರಾಂತ ಐಎಎಸ್ ಅಧಿಕಾರಿ ಟಿ. ಶ್ಯಾಮ ಭಟ್, ವಿಶ್ರಾಂತ ಪ್ರಾಂಶುಪಾಲ ಪ್ರೊಘಿ.ಎಂ.ಎಲ್. ಸಾಮಗ, ತುಮಕೂರು ವಿವಿ ಪ್ರಾಧ್ಯಾಪಕ ಪ್ರೊ.ನಿತ್ಯಾನಂದ ಬಿ. ಶೆಟ್ಟಿ, ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ರೆ ಫಾ. ಮೆಲ್ವಿನ್ ಜೋಸೆಫ್ ಪಿಂಟೊ, ಕೃತಿಕಾರ ಸೂರಿಕುಮೇರು ಕೆ. ಗೋವಿಂದ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 4ಕ್ಕೆ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ತ್ಯಾಗಮೇವ ಜಯತೇ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ಸಂತ ಅಲೋಶಿಯಸ್ ಕಾಲೇಜು ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂತ ಅಲೋಶಿಯಸ್ ಪ್ರಕಾಶನ ಸಂಸ್ಥೆಯಿಂದ ಪುಸ್ತಕ ಪ್ರಕಾಶನಗೊಂಡಿದೆ. ಯುಜಿಸಿ ಸ್ಟ್ರೈಡ್ ಯೋಜನೆ ಸಹಯೋಗ ನೀಡಿದೆ. ತೆಂಕುತಿಟ್ಟು ಯಕ್ಷಗಾನದ ‘ದಶಾವತಾರಿ’ ಎಂದೇ ಪ್ರಸಿದ್ಧರಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸೂರಿಕುಮೇರು ಕೆ. ಗೋವಿಂದ ಭಟ್ ಅವರು ದಾಖಲೆಯ ಎಪ್ಪತ್ತು ವರ್ಷಗಳ ಕಾಲ ಮೇಳದ ತಿರುಗಾಟ ನಡೆಸಿದ್ದಾರೆ. ಧರ್ಮಸ್ಥಳ ಮೇಳವೊಂದರಲ್ಲೇ 54 ವರ್ಷ ಬಣ್ಣ ಹಚ್ಚಿದ್ದಾರೆ. 80ರ ಇಳಿಹರೆಯದ ಗೋವಿಂದ ಭಟ್ ಅವರು ತಮ್ಮ ಯಕ್ಷಪಯಣದ ನೋವು- ನಲಿವು, ಏಳು-ಬೀಳುಗಳನ್ನು ಅಕ್ಷರ ರೂಪದಲ್ಲಿ ದಾಖಲಿಸಿದ್ದಾರೆ. ಇಂತಹ ಅಪೂರ್ವ ಕಲಾವಿದರ ಕೃತಿಯನ್ನು ನಮ್ಮ ಸಂಸ್ಥೆ ಹೊರತರುತ್ತಿದೆ ಎಂದರು.

ಸೂರಿಕುಮೇರು ಕೆ. ಗೋವಿಂದ ಭಟ್ ಅವರು ಮಾತನಾಡಿ, ನನ್ನ ಜೀವನಕ್ಕೆ ಸಂಬಂಸಿ ಈಗಾಗಲೇ ಪುಸ್ತಕವೊಂದು ಬಿಡುಗಡೆಗೊಂಡಿದೆ. ಎಪ್ಪತ್ತು ತಿರುಗಾಟಗಳು ಪುಸ್ತಕದಲ್ಲಿ ನನ್ನ ಯಕ್ಷಪಯಣದ ಬಗ್ಗೆ ಹಲವಾರು ವಿಚಾರಗಳನ್ನು ನಾನೇ ಬರೆದಿದ್ದೇನೆ. ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಆಲೋಚನೆ ಇರಲಿಲ್ಲಘಿ. ಆದರೆ, ಅಲೋಶಿಯಸ್ ಸಂಸ್ಥೆ ಪುಸ್ತಕ ಪ್ರಕಟಿಸುತ್ತದೆ. ಈ ಹಿಂದಿನ ಪುಸ್ತಕಗಳು ಸಂಪೂರ್ಣವಾಗಿ ಮಾರಾಟವಾಗಿದ್ದು, ಹೊಸ ಪುಸ್ತಕವನ್ನೂ ಜನರು ಕೊಂಡುಕೊಳ್ಳುವ ನಿರೀಕ್ಷೆಯಿದೆ ಎಂದರು.

ಕಾಲೇಜಿನ ಯುಜಿಸಿ ಸ್ಟ್ರೈಡ್ ಯೋಜನೆ ನಿರ್ದೇಶಕ ಡಾ. ಆಲ್ವಿನ್ ಡೇಸಾ, ಅಲೋಶಿಯಸ್ ಪ್ರಕಾಶನ ನಿರ್ದೇಶಕಿ ಡಾ. ವಿದ್ಯಾ ವಿನುತ ಡಿಸೋಜ, ಕಾರ್ಯಕ್ರಮ ಸಂಯೋಜಕ ಡಾ. ದಿನೇಶ್ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News