ಉಳಾಯಿಬೆಟ್ಟು: ಬಾಲಕಿಯ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

Update: 2021-11-24 10:50 GMT

ಮಂಗಳೂರು, ನ. 24: ನಗರವನ್ನೇ ಬೆಚ್ಚಿ ಬೀಳಿಸಿದ್ದು ಮಾತ್ರವಲ್ಲದೆ ಜನರು ತಲೆತಗ್ಗಿಸುವಂತೆ ಮಾಡಿದ್ದ ಉಳಾಯಿಬೆಟ್ಟು ಸಮೀಪದ ಪರಾರಿ ಎಂಬಲ್ಲಿನ ಟೈಲ್ಸ್ ಫ್ಯಾಕ್ಟರಿಯಲ್ಲಿ ಕಳೆದ ರವಿವಾರ ಪತ್ತೆಯಾಗಿದ್ದ ಎಂಟು ವರ್ಷದ ಬಾಲಕಿಯ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಧ್ಯ ಪ್ರದೇಶದ ಪನ್ನಾ ಜಿಲ್ಲೆಯ ಜಯ್‌ಬನ್ ಅಲಿಯಾಸ್ ಜಯ್ ಸಿಂಗ್ (21 ವರ್ಷ- ಎ1 ಆರೋಪಿ) ಮುಕೇಶ್ ಸಿಂಗ್ (20 ವರ್ಷ- ಎ2 ), ಮುನೀಮ್ ಸಿಂಗ್ ( 20 ವರ್ಷ - ಎ4) ಹಾಗೂ ಜಾರ್ಖಂಡ್ ರಾಜ್ಯದ ರಾಂಚಿ ಜಿಲ್ಲೆಯ ಮನಿಶ್ ತಿರ್ಕಿ ( 33 ವರ್ಷ- ಎ 3) ಬಂಧಿತ ಆರೋಪಿಗಳಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಪ್ರಕರಣದ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಫೂಟೇಜ್, ಸಿಡಿಆರ್ ವಿಶ್ಲೇಷಣೆ, ಪ್ರತ್ಯಕ್ಷ ಸಾಕ್ಷಿಗಳು, ಸಾಂದರ್ಭಿಕ ಸಾಕ್ಷಿಗಳು ಹಾಗೂ ಆರೋಪಿಗಳ ತಪ್ಪೊಪ್ಪಿಗೆ ಹೇಳಿಕೆಯಿಂದ ಈ ನಾಲ್ವರು ಆರೋಪಿಗಳು ಈ ದುಷ್ಕೃತ್ಯದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದರು.

ಪರಾರಿಯಲ್ಲಿರುವ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಮೃತ ಬಾಲಕಿಯ ತಂದೆತಾಯಿ ಜಾರ್ಖಂಡ್ ರಾಜ್ಯದ ಸಿಂಡೇಗಾ ಜಿಲ್ಲೆಯವರಾಗಿದ್ದು, ನಾಲ್ವರು ಮಕ್ಕಳನ್ನು ಹೊಂದಿದ್ದಾರೆ. ಇವರು ಎರಡು ವರ್ಷಗಳಿಂದ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಇಬ್ಬರೂ ವಿಪರೀತ ಕುಡಿತದ ಚಟವನ್ನು ಹೊಂದಿದವರಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ನ. 21ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಊಟ ಮಾಡಿ ತನ್ನ ಸಹೋದರ ಸಹೋದರಿಯರೊಂದಿಗೆ ಆಟವಾಡಲು ಹೋಗಿದ್ದ 8 ವರ್ಷದ ಬಾಲಕಿ ವಾಪಸ್ ಬರದಿದ್ದಾಗ ಅಪರಾಹ್ನ 3 ಗಂಟೆಯ ಸುಮಾರಿಗೆ ತಂದೆತಾಯಿ ಹುಡುಕಾಟ ನಡೆಸಿದ್ದಾರೆ. ಸಂಜೆ 6 ಗಂಟೆಯ ಸುಮಾರಿಗೆ ಫ್ಯಾಕ್ಟರಿ ಒಳಗಡೆ ಇರುವ ತೋಡಿನ ಒಳಗಡೆ ಬಾಲಕಿಯ ಮೃತದೇಹ ಪತ್ತೆಯಾಗಿತ್ತು.

 ಕ್ಲಿಷ್ಟ- ಸೂಕ್ಷ್ಮ ಪ್ರಕರಣ: 30ಕ್ಕೂ ಅಧಿಕ ಪೊಲೀಸರಿಂದ ಕಾರ್ಯಾಚರಣೆ

ತಕ್ಷಣ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪ್ರಕರಣ ಅತೀ ಸೂಕ್ಷ್ಮ ಹಾಗೂ ಗಂಭೀರವಾಗಿದ್ದ ಕಾರಣ ನಾಲ್ಕು ತಂಡಗಳೊಂದಿಗೆ ಕಾರ್ಯಾಚರಣೆ ನಡೆಸಲಾಗಿತ್ತು. ಹಿರಿಯ ಅಧಿಕಾರಿಗಳು ಸೇರಿದಂತೆ 30ಕ್ಕೂ ಅಧಿಕ ಪೊಲೀಸರು ಕಳೆದ ನಾಲ್ಕು ದಿನಗಳಿಂದ ಪ್ರತಿ ಹಂತದಲ್ಲೂ ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಲು ಸಾಧ್ಯವಾಯಿತು ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದರು.

ಪ್ರಕರಣದಲ್ಲಿ ಎ3 ಆರೋಪಿ ಫ್ಯಾಕ್ಟರಿಯಲ್ಲಿ ಕಳೆದ 11 ತಿಂಗಳಿನಿಂದ ಎ 1 ಮತ್ತು ಎ2 ಆರೋಪಿ ಮೂರು ತಿಂಗಳಿನಿಂದ ಕೂಲಿ ಕಾರ್ಮಿಕರಾಗಿದ್ದರು. ಎ4 ಆರೋಪಿ ಪುತ್ತೂರಿನಲ್ಲಿ ಕೂಲಿ ಕಾರ್ಮಿಕನಾಗಿದ್ದು, ಕೃತ್ಯ ನಡೆದ ಹಿಂದಿನ ದಿನ ಎ3 ಆರೋಪಿಯನ್ನು ಭೇಟಿಯಾಗಲು ಬಂದಿದ್ದ. ಎ1 ಮತ್ತು ಎ3 ಆರೋಪಿ ಹೆಚ್ಚಾಗಿ ಒಂದೇ ರೂಮಿನಲ್ಲಿ ವಾಸವಾಗಿದ್ದರು. ಮೃತ ಬಾಲಕಿಯನ್ನು ಅನೇಕ ಬಾರಿ ರೂಮಿಗೆ ಕರೆಸಿಕೊಂಡು ಅನುಚಿತ ವರ್ತನೆ ಮತ್ತು ಲೈಂಗಿಕ ದೌರ್ಜನ್ಯ ಎಸಗಿ ಚಿಲ್ಲರೆ ಹಣ, ಚಾಕಲೇಟ್ ನೀಡಿ ಮಗುವನ್ನು ಪುಸಲಾಯಿಸುತ್ತಿದ್ದುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.

ಇದೊಂದು ಅತ್ಯಂತ ಅಮಾನವೀಯ ಹಾಗೂ ದುರದೃಷ್ಟಕರ ಘಟನೆಯಾಗಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣವನ್ನು ಬೇಧಿಸುವಲ್ಲಿ ಕಾರ್ಯ ನಿರ್ವಹಿಸಿದ ಪೊಲೀಸ್ ತಂಡಕ್ಕೆ ನಗದು ಬಹುಮಾನವನ್ನು ಘೋಷಿಸುವುದಾಗಿ ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್, ಎಸಿಪಿ ರಂಜಿತ್ ಬಂಡಾರು, ರವೀಶ್ ನಾಯ್ಕ್, ಪ್ರಕರಣ ಪತ್ತೆಯಲ್ಲಿ ಭಾಗಿಯಾದ ಪೊಲೀಸರು ಉಪಸ್ಥಿತರಿದ್ದರು.


ಸಾಮೂಹಿಕ ಅತ್ಯಾಚಾರ- ಕತ್ತು ಹಿಸುಕಿ ಕೊಲೆ

ಕೃತ್ಯ ನಡೆದ ನಾಲ್ಕೈದು ದಿನಗಳ ಹಿಂದೆ ಜಯ್ ಸಿಂಗ್, ಮುಕೇಶ್ ಸಿಂಗ್ ಹಾಗೂ ಮನಿಶ್ ತಿರ್ಕಿ ರೂಮಿನಲ್ಲಿ ಮದ್ಯಪಾನ ಮಾಡುತ್ತಾ ಮಾತುಕತೆ ನಡೆಸಿದ್ದು ರವಿವಾರ ಸಿಬ್ಬಂದಿ ಹಾಗೂ ಕಾರ್ಮಿಕರು ಯಾರೂ ಫ್ಯಾಕ್ಟರಿಯಲ್ಲಿ ಇರುವುದಿಲ್ಲ. ಮಗುವಿನ ತಂದೆತಾಯಿಯೂ ಮದ್ಯದ ನಶೆಯಲ್ಲಿರುತ್ತಾರೆ. ಆದ್ದರಿಂದ ಅಂದು ತಮ್ಮ ದುಷ್ಕೃತ್ಯಕ್ಕೆ ಯೋಜನೆ ರೂಪಿಸಿದ್ದರು. ಶನಿವಾರ ಆರೋಪಿ ಮುನೀಮ್ ಸಿಂಗ್ ಬಂದಾಗ ಅವನಿಗೂ ಈ ವಿಷಯ ತಿಳಿಸಿದ್ದು, ಆತನೂ ರವಿವಾರ ಅಲ್ಲಿಗೆ ಆಗಮಿಸಿದ್ದ. ರವಿವಾರ ಮಧ್ಯಾಹ್ನ 1-10ರ ವೇಳೆಗೆ ಬಾಲಕಿ ತನ್ನ ಸಹೋದರ, ಸಹೋದರಿಯರೊಂದಿಗೆ ಫ್ಯಾಕ್ಟರಿ ಕಂಪೌಡಿನ ಒಳಗಡೆ ಇರುವ ನೀರಿನ ಟ್ಯಾಂಕ್ ಬಳಿ ಆಟವಾಡುತ್ತಿದ್ದಾಗ ಆರೋಪಿಗಳು ಬಲವಂತವಾಗಿ ಬಾಲಕಿಯ ಬಾಯಿ ಮುಚ್ಚಿ ರೂಮಿನೊಳಗೆ ಕರೆದೊಯ್ದು ಸಾಮೂಹಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಸಂದರ್ಭ ರಕ್ತಸ್ರಾವವಾಗಿ ಬಾಲಕಿ ನೋವಿನಿಂದ ಕಿರುಚಾಡಿದಾಗ ಜಯ್ ಸಿಂಗ್ ಆರೋಪಿ ಬಾಲಕಿಯ ಕತ್ತು ಹಿಸುಕಿ ಸಾಯಿಸಿದ್ದಾನೆ. ಬಳಿಕ ಮೃತದೇಹವನ್ನು ಕೊಂಡೊಯ್ದು ತೋಡಿಗೆ ಎಸೆದಿದ್ದರು. ಬಳಿಕ ಮುಕೇಶ್ ಸಿಂಗ್ ಮತ್ತು ಮುನೀಮ್ ಸಿಂಗ್ ಪುತ್ತೂರಿಗೆ ತೆರಳಿದ್ದು, ಜಯ್ ಸಿಂಗ್ ಮತ್ತು ಮನಿಶ್ ತಿರ್ಕಿ ಅಲ್ಲೇ ಮನೆಯವರ ಜತೆಗಿದ್ದರು. ಮಗುವಿನ ಪೋಷಕರ ಜತೆ ಬಾಲಕಿಯನ್ನು ಹುಡುಕಾಡುವಂತೆ ನಟಿಸಿದ್ದರು ಎಂದು ಕಮಿಷನರ್ ಶಶಿಕುಮಾರ್ ವಿವರ ನೀಡಿದರು.


ಇದೊಂದು ಎಚ್ಚರಿಕೆ ಕರೆಗಂಟೆಯಾಗಿ ಪರಿಗಣನೆ
ಕೋವಿಡ್ ಅನ್‌ಲಾಕ್ ಬಳಿಕ ಮತ್ತೆ ಹೊರ ರಾಜ್ಯ, ಜಿಲ್ಲೆಗಳ ಕಾರ್ಮಿಕರ ಚಟುವಟಿಕೆಗಳು ಜಿಲ್ಲೆಯಲ್ಲಿ ಸಕ್ರಿಯವಾಗಿವೆ. ಮಹಿಳೆಯರು, ಹೆಣ್ಣು ಮಕ್ಕಳಿರುವ ಇಂತಹ ಹೊರ ರಾಜ್ಯ, ಜಿಲ್ಲೆಗಳ ಕಾರ್ಮಿಕರಿರುವ ತಾಣಗಳಲ್ಲಿ ಸೂಕ್ತ ಭದ್ರತೆ, ಸುರಕ್ಷತೆಯ ಕುರಿತಂತೆ ತಪಾಸಣೆ ಅಗತ್ಯವಾಗಿದೆ. ಸಂಬಂಧಪಟ್ಟ ಸಂಸ್ಥೆಗಳ ಮಾಲಕರು ಈ ಬಗ್ಗೆ ಗಮನ ಹರಿಸಬೇಕು. ಕೆಲವೇ ದಿನಗಳ ಅಂತರದಲ್ಲಿ ನಗರದಲ್ಲಿ ಎರಡು ಪ್ರಕರಣಗಳು ನಡೆದಿದ್ದು, ಪೊಲೀಸ್ ಇಲಾಖೆ ಇದನ್ನು ಎಚ್ಚರಿಕೆಯ ಕರೆಗಂಟೆಯಾಗಿ ಪರಿಗಣಿಸಿದೆ. ನಗರದಲ್ಲಿರುವ ಎಲ್ಲಾ ಇಂತಹ ತಾಣಗಳ ಪಟ್ಟಿ ಮಾಡಲಾಗುತ್ತಿದ್ದು, ಸಂಬಂಧ ಪಟ್ಟ ಇಲಾಖೆಗಳ ಮೂಲಕ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಖುದ್ದು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಚರ್ಚಿಸಲಾಗುವುದು. ಜತೆಗೆ ಪೊಲೀಸ್ ಸಿಬ್ಬಂದಿ ಕೂಡಾ ಇಂತಹ ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡಿ ನಿಗಾ ವಹಿಸುವ ಕಾರ್ಯ ಮಾಡಲಿದ್ದಾರೆ.
-ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News