×
Ad

ರಾ. ಶಿಕ್ಷಣ ನೀತಿಗೆ ಎನ್‌ಎಸ್‌ಯುಐ ವಿರೋಧ: ಕೀರ್ತಿಗಣೇಶ್

Update: 2021-11-24 19:14 IST

ಉಡುಪಿ, ನ.24: ಸಂಸತ್‌ನಲ್ಲಾಗಲಿ, ದೇಶದೆಲ್ಲೆಡೆಯಲ್ಲಾಗಲೀ ಯಾವುದೇ ಚರ್ಚೆಗೆ ಒಡ್ಡದೇ ಜಾರಿಗೊಳಿಸುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಎನ್‌ಎಸ್‌ಯುಐ ತಿರಸ್ಕರಿಸುತ್ತದೆ. ಇದರ ವಿರುದ್ಧ ನಾಡಿನಾದ್ಯಂತ ವಿದ್ಯಾರ್ಥಿಗಳಲ್ಲಿ ಜಾಗೃತಿ ಯನ್ನು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಇಪಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಿರದೇ, ಮಾರಕಾಗಿದೆ. ಇದನ್ನು ನಾವು ತಿರಸ್ಕರಿಸುತ್ತೇವೆ. ವಿದ್ಯಾರ್ಥಿಗಳೊಂದಿಗೆ, ತಜ್ಞರೊಂದಿಗೆ ಹೊಸದಾಗಿ ಚರ್ಚಿಸಿ ಹೊಸದಾಗಿ ಶಿಕ್ಷಣ ನೀತಿಯನ್ನು ಮಂಡಿಸುವಂತೆ ನಾವು ಒತ್ತಾಯಿಸುತ್ತೇವೆ ಎಂದವರು ನುಡಿದರು.

ಈಗಿನ ಹೊಸ ರಾ.ಶಿಕ್ಷಣ ನೀತಿ ಶಿಕ್ಷಣದ ಖಾಸಗೀಕರಣಕ್ಕೆ ಒತ್ತು ನೀಡುತ್ತದೆ. ಇದರಿಂದ ಶಿಕ್ಷಣ ಕ್ಷೇತ್ರದ ಮೇಲೆ ರಾಜ್ಯ ಸರಕಾರ ಹಾಗೂ ವಿಶ್ವವಿದ್ಯಾಲಯಗಳ ಹಿಡಿತ ಸಡಿಲಗೊಳ್ಳುತ್ತವೆ. ತಾವೇ ನಡೆಸುವ ಪ್ರವೇಶ ಪರೀಕ್ಷೆಗಳ ಆಧಾರದಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವ ಕಾಲೇಜು ಆಡಳಿತ ಮಂಡಳಿಗಳೇ ಪರೀಕ್ಷೆಗಳನ್ನು ನಡೆಸುತ್ತವೆ. ಇದರಿಂದ ವ್ಯಾಪಕ ಅಕ್ರಮಗಳು ನಡೆಯಲು ಅವಕಾಶವಾಗುತ್ತದೆ ಎಂದು ಕೀರ್ತಿ ಗಣೇಶ ಹೇಳಿದರು.

ಕಾಲೇಜುಗಳು ತಮಗೆ ಬೇಕಾದವರಿಗೆ ಪ್ರವೇಶ ನೀಡುವುದು ಮಾತ್ರವಲ್ಲದೇ, ಇದು ಹಣವಿದ್ದವರಿಗೆ ಮಣೆ ಹಾಕಲು ಅವಕಾಶ ಮಾಡಿಕೊಡುತ್ತದೆ. ಸರಕಾರ ಜಾರಿಗೊಳಿಸಿರುವ ಎನ್‌ಇಪಿ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜು ಅಧ್ಯಾಪಕರುಗಳಿಗೇ ಯಾವುದೇ ಮಾಹಿತಿ ಇಲ್ಲವಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ರಫೀಕ್ ಅಲಿ ನುಡಿದರು.

ನಾಲ್ಕು ವರ್ಷಗಳ ಪದವಿ ವಿದ್ಯಾಭ್ಯಾಸದ ಯಾವುದೇ ಹಂತದಲ್ಲಿ ಕಲಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಅವಕಾಶ ನೀಡಿರು ವುದು ಮಕ್ಕಳ ಭವಿಷ್ಯಕ್ಕೆ ಮಾರಕ ವಾಗಿದೆ. ಇದರಿಂದ ಯಾರೂ ವಿದ್ಯಾಭ್ಯಾಸವನ್ನು ಗಂಭೀರವಾಗಿ ತೆಗೆದುಕೊಳ್ಳ ದಿರುವ ಅಪಾಯವಿದೆ ಎಂದ ಅವರು, ಮೂರು ಭಾಷಾ ಕಲಿಕೆ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸುವ ತಂತ್ರವಾಗಿದೆ ಎಂದರು.

ಕೋವಿಡ್ ಬಳಿಕ ಇದೀಗ ರಾಜ್ಯಾದ್ಯಂತ ಕಾಲೇಜುಗಳು ಮತ್ತೆ ಪ್ರಾರಂಭ ಗೊಂಡಿರುವುದರಿಂದ ಎನ್‌ಎಸ್‌ಯುಐ ರಾಜ್ಯಾದ್ಯಂತ ಪ್ರವಾಸ ಮಾಡಿ ಹೊಸ ಶಿಕ್ಷಣ ನೀತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸಲು ಪ್ರಯತ್ನಿಸಲಿದೆ. ಈಗಾಗಲೇ ಬೆಂಗಳೂರು, ಹಾಸನ, ಚಿತ್ರದುರ್ಗ ಜಿಲ್ಲೆಗಳ ಪ್ರವಾಸ ಮುಗಿಸಿದ್ದೇವೆ ಎಂದು ಕೀರ್ತಿ ಗಣೇಶ್ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಎನ್‌ಎಸ್‌ಯುಐನ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳಾದ ಎಚ್.ಎ.ಭರತರಾಮನ್, ಮಹಮ್ಮದ್ ಝಮೀರ್, ಸೌರಭ ಬಲ್ಲಾಳ್, ರಕ್ಷಿತ್‌ರಾಜ್, ಸಾರ್ಥಕ್, ಸಾಯಿ ಕಿರಣ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News