ಉಡುಪಿ: ನ.26ರಿಂದ ಯುವ ಮೋರ್ಚಾದಿಂದ ಸಂವಿಧಾನ ಗೌರವ ಅಭಿಯಾನ
ಉಡುಪಿ, ನ.24: ಭಾರತೀಯ ಜನತಾ ಪಾರ್ಟಿಯ ಎಸ್‌ಸಿ ಮೋರ್ಚಾದ ವತಿಯಿಂದ ಸಂವಿಧಾನ ದಿನದ ಅಂಗವಾಗಿ ನ.26ರಿಂದ ಡಿ.6ರವರೆಗೆ ಸಂವಿಧಾನ ಗೌರವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರಬಾಬು ಹೇಳಿದ್ದಾರೆ.
ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.26ರಂದು ಜಿಲ್ಲಾ ಕಚೇರಿಯಲ್ಲಿ ಸುಮಾರು 500 ಮಂದಿ ಸೇರಿ ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ ಗೌರವ ಸಮರ್ಪಣೆ ಸಲ್ಲಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಐದು ಮಂಡಲದಿಂದ ದಲಿತ ಸಮುದಾಯಕ್ಕೆ ಸೇರಿದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಗೊಂಡ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಅದೇ ರೀತಿ ದಲಿತ ಸಮುದಾಯಕ್ಕೆ ಸೇರಿದ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರನ್ನು ಸಹ ಸನ್ಮಾನಿಸಲಾಗುವುದು ಎಂದರು.
ಕಳೆದ ಸುಮಾರು 30 ವರ್ಷಗಳಿಂದ ಕಂಬಳದ ಕೋಣಗಳನ್ನು ವಿಶೇಷ ಮುತುವರ್ಜಿಯಿಂದ ಸಾಕಿ ಪೋಷಿಸಿಕೊಂಡು ಬರುತ್ತಿ ರುವ ದಲಿತ ಸಮುದಾಯಕ್ಕೆ ಸೇರಿದ ಗುರುವ ಕೊರಂಗ್ರಪಾಡಿ ಹಾಗೂ ಜಾನಪದ ಕಲಾವಿದ, ಗಾಯಕ ಗಣೇಶ ಗಂಗೊಳ್ಳಿ ಇವರನ್ನು ಸಹ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಗೋಪಾಲ ಕಳಂಜೆ, ಪ್ರಧಾನ ಕಾರ್ಯದರ್ಶಿ ಸದಾನಂದ ಮಲ್ಲಾರು ಕಾಪು, ಚಂದ್ರ ಪಂಚವಟಿ, ಸೋಮನಾಥ ಕಟ್ಟೆಗುಡ್ಡ, ರಾಜೇಂದ್ರ ಬನ್ನಂಜೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.