×
Ad

ದೇವರ ಪಲ್ಲಕ್ಕಿ ಹೊತ್ತ ಶಾಸಕ ಹರೀಶ್ ಪೂಂಜಾ: ಅವಕಾಶ ಕೊಟ್ಟ ಯುವಕರಿಂದ ತಪ್ಪು ಕಾಣಿಕೆ, ದೇವಸ್ಥಾನದಲ್ಲಿ ಕ್ಷಮೆಯಾಚನೆ

Update: 2021-11-24 19:53 IST

ಬೆಳ್ತಂಗಡಿ, ನ.24: ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ(ಜಿ.ಎಸ್.ಬಿ.)ದ ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದ ದೇವರ ಪಲ್ಲಕ್ಕಿಯನ್ನು ಶಾಸಕ ಹರೀಶ್ ಪೂಂಜಾ ಹೊತ್ತ ವಿಚಾರ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಪಲ್ಲಕ್ಕಿ ಹೊರಲು ಶಾಸಕರನ್ನು ಕರೆತಂದ ಯುವಕರು ದೇವಸ್ಥಾನದಲ್ಲಿ ತಪ್ಪುಕಾಣಿಕೆ ಹಾಕಿ ಕ್ಷಮೆ ಯಾಚಿಸಿರುವುದಾಗಿ ತಿಳಿದು ಬಂದಿದೆ. ಸಂಪ್ರದಾಯ ಮುರಿದು ಪಲ್ಲಕ್ಕಿ ಹೊತ್ತ ಶಾಸಕ ಹರೀಶ್ ಪೂಂಜಾ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧ ಸಮುದಾಯದ ಒಳಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಈ ಹಿನ್ನಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ತುರ್ತು ಸಭೆ ಕರೆದು ಬಳಿಕ ಕಾಶೀಮಠದ ಸ್ವಾಮೀಜಿಯವರ ಬಳಿಗೆ ಘಟನೆಗೆ ಕಾರಣರಾದ ಯುವಕರನ್ನು ಕರೆದೊಯ್ದು ಈ ವಿಚಾರವನ್ನು ಅವರ ಗಮನಕ್ಕೆ ತಂದಿದ್ದಾರೆನ್ನಲಾಗಿದೆ. ಸ್ವಾಮೀಜಿ ಈ ಯುವಕರಿಗೆ ದೇವರ ನಡೆಯಲ್ಲಿ ತೆಂಗಿನಕಾಯಿ ಇಟ್ಟು ತಮ್ಮಿಂದಾದ ಪ್ರಮಾದದ ಬಗ್ಗೆ ದೇವರಲ್ಲಿ ತಪ್ಪು ನಿವೇದನೆ ಮಾಡಿ ಕ್ಷಮಾಪಣೆ ಕೇಳಬೇಕೆಂದು ಸೂಚಿಸಿದ್ದರು. ಅದರಂತೆ ಬುಧವಾರ ಈ ಇಬ್ಬರು ಯುವಕರು ಶಾಸ್ತ್ರೋ್ತವಾಗಿ ವಿಧಿವಿಧಾನದಂತೆ ತಪ್ಪುಕಾಣಿಕೆ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.

ಘಟನೆಯ ಹಿನ್ನೆಲೆ: ಕಾರ್ತಿಕ ಹುಣ್ಣಿಮೆಯ ದೀಪೋತ್ಸವದಂದು ಲಾಯಿಲ ವೆಂಕಟರಮಣ ದೇವಸ್ಥಾನದ ದೀಪೋತ್ಸವದ ನಿಮಿತ್ತ ಾತ್ರಿ ಪೇಟೆ ಸವಾರಿ ಪಲ್ಲಕ್ಕಿ ಉತ್ಸವ ನಡೆದಿತ್ತು. ಪಲ್ಲಕ್ಕಿ ಉತ್ಸವವು ರಾತ್ರಿ ಬೆಳ್ತಂಗಡಿ ನಗರದ ಮಧ್ಯಭಾಗ ತಲುಪುತ್ತಿದ್ದಂತೆ ತನ್ನೆಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಊರಿಗೆ ತೆರಳುತ್ತಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅಲ್ಲಿಗೆ ತಲುಪಿದ್ದಾರೆ. ಅವರು ತಮ್ಮ ಕಾರಿನಿಂದಿಳಿದು ದೇವರ ಪಲ್ಲಕ್ಕಿ ಕಡೆಗೆ ತೆರಳಿ ಕೈ ಮುಗಿದು ಪ್ರಸಾದವನ್ನು ಸ್ವೀಕರಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಕರೆತಂದು ಕೆಲ ಯುವಕರು ದೇವರ ಪಲ್ಲಕ್ಕಿಗೆ ಹೆಗಲು ಕೊಡಲು ಹೇಳಿದ್ದು ಅದರಂತೆ ಅವರು ಪಲ್ಲಕಿಗೆ ಹೆಗಲು ಕೊಟ್ಟು ತುಸು ದೂರದವರೆಗೆ ಪಲ್ಲಕ್ಕಿ ಹೊತ್ತು ನಡೆದಿದ್ದರು.

ಇದೀಗ ಒಟ್ಟು ವಿವಾದದಲ್ಲಿ ಜಿಎಸ್ಬಿ ಸಂಪ್ರದಾಯದಂತೆ ದೇವರ ಪಲ್ಲಕಿ ಹೊರಲು ಹಿಂದೂ ಧರ್ಮದ ಇತರರಿಗೆ ಅವಕಾಶವಿದೆಯೇ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಇದೇ ವಿಚಾರವನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದು, ಶಾಸಕರು ಶೂದ್ರರಾ  ಗಿರುವ ಕಾರಣದಿಂದಾಗಿಯೇ ಅಥವಾ ಬೇರೆ ಯಾವುದಾದರೂ ಸಂಪ್ರದಾಯದ ಕಾರಣಕ್ಕಾಗಿ ಇದೀಗ ತಪ್ಪುಕೇಳುವ ಪ್ರಕ್ರಿಯೆ ನಡೆದಿದೆಯೇ ಎಂಬ ಪ್ರಶ್ನೆಯನ್ನು ಮುಂದಿಡುತ್ತಿದ್ದಾರೆ. ಈ ಚರ್ಚೆ ಯಾವ ಹಂತದ ವರೆಗೆ ಮುಂದುವರಿಯಲಿದೆ ಎಂದು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News