ನಂದಿಕೂರಿನಿಂದ ಕೇರಳಕ್ಕೆ ವಿದ್ಯುತ್ ಲೈನ್: ಸರ್ವೇ ಕಾರ್ಯ ಮುಂದೂಡಿದ ಜಿಲ್ಲಾಡಳಿತ

Update: 2021-11-24 17:17 GMT

ಪಡುಬಿದ್ರಿ: ಉಡುಪಿ ಜಿಲ್ಲೆಯ ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಒಡೆತನದ ಕಲ್ಲಿದ್ದಲು ಆಧಾರಿತ ಉಷ್ಣವಿದ್ಯುತ್ ಸ್ಥಾವರ ಯುಪಿಸಿಎಲ್ ಯೋಜನೆಯಿಂದ ಕೇರಳದ ಕಾಸರಗೋಡಿಗೆ 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ಯೋಜನೆಗೆ ಬುಧವಾರ ನಡೆಯಬೇಕಿದ್ದ ಸರ್ವೇ ಕಾರ್ಯವನ್ನು ಸ್ಥಳೀಯ ಗ್ರಾಮ ಪಂಚಾಯತ್‍ಗಳ ವಿರೋಧಕ್ಕೆ ಮಣಿದು ಜಿಲ್ಲಾಡಳಿತ ಮುಂದೂಡಿದೆ.  

ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಎಲ್ಲೂರು, ಮುದರಂಗಡಿ, ಪಲಿಮಾರು ಹಾಗೂ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿ ಈ ವಿದ್ಯುತ್ ಪ್ರಸರಣ ಮಾರ್ಗ ಹಾದು ಹೋಗಲಿದ್ದು, ಈ ಭಾಗದಲ್ಲಿ ಬುಧವಾರದಿಂದ ಸರ್ವೇ ಕಾರ್ಯ ನಡೆಯಬೇಕಿತ್ತು. ಈ ಬಗ್ಗೆ ನಾಲ್ಕು ಗ್ರಾಮ ಪಂಚಾಯಿತಿಗಳು ಆಕ್ಷೇಪಣೆ ಸಲ್ಲಿಸಿತ್ತು.

ಬುಧವಾರ ಪೊಲೀಸ್ ಬಲದೊಂದಿಗೆ ಸರ್ವೇ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿತ್ತು. ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಬುಧವಾರ ಬೆಳಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಸರ್ವೇ ಕಾರ್ಯ ಮುಂದೂಡುವ ಬಗ್ಗೆ ಮಾಹಿತಿ ನೀಡಲಾಯಿತು.   
ಸರ್ವೇ ಕಾರ್ಯವನ್ನು ಮುಂದೂಡಲಾಗಿದೆ. ಸಭೆಯ ಬಗ್ಗೆ ಚರ್ಚಿಸಿ ಮುಂದೆ ತಿಳಿಸಲಾಗುವುದು. ತಾಲ್ಲೂಕು ಕಚೇರಿ ಅಥವಾ ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಸಲು ತೀರ್ಮಾಣಿಸಲಾಗಿದೆ ಎಂದು ಕಾಪು ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಹೇಳುತ್ತಾರೆ.

ಯಾವುದೇ ಅಹವಾಲು ಸಭೆ ನಡೆಸದೆ ಏಕಾಏಕಿ ಸರ್ವೇ ನಡೆಸುವುದು ಸರಿಯಲ್ಲ. ಯೋಜನೆಯಿಂದ ಆಗುವ ಸಾಧಕ ಬಾಧಕಗಳ ಬಗ್ಗೆ ಸಭೆಯಲ್ಲಿ ಚರ್ಚಿಸಬೇಕು ಎಂದು ಎಲ್ಲೂರು ಗ್ರಾಮ ಪಂ. ಅಧ್ಯಕ್ಷ ಜಯಂತ ಕುಮಾರ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News