ಭಾರತದ ಗಡಿಸಮೀಪ ಹಾರಾಟ ನಡೆಸಿದ ಚೀನಾದ ಎಚ್-6ಕೆ ಬಾಂಬರ್ ವಿಮಾನ: ಚೀನಾ ಮಾಧ್ಯಮಗಳ ಹೇಳಿಕೆ

Update: 2021-11-24 17:56 GMT
photo:The Print

ಬೀಜಿಂಗ್, ನ.24: ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ)ಯ ಎಚ್-6ಕೆ ಬಾಂಬರ್ ವಿಮಾನ ಭಾರತದ ಗಡಿಯ ಅತ್ಯಂತ ಸನಿಹದಲ್ಲಿ ಹಾರಾಟ ನಡೆಸಿರುವುದಾಗಿ ಚೀನಾದ ಮಾಧ್ಯಮಗಳು ಹೇಳಿಕೆ ನೀಡಿವೆ.

ಭಾರತದೊಂದಿಗಿನ ಗಡಿಭಾಗದಲ್ಲಿ ಎಚ್-6ಕೆ ಬಾಂಬರ್ ವಿಮಾನ ಹಾರಾಟ ನಡೆಸಿವೆ ಎಂದು ಚೀನಾದ ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ಸಿಸಿಟಿವಿ ವರದಿ ಮಾಡಿದ್ದು ಈ ವರದಿಯನ್ನು ಚೀನಾದ ಇತರ ಮಾಧ್ಯಮಗಳು ಹಾಗೂ ಭಾರತದ ಮಾಧ್ಯಮಗಳೂ ಹಂಚಿಕೊಂಡಿವೆ. ಚೀನಾ ಸೇನೆಯ 72ನೇ ವಾರ್ಷಿಕೋತ್ಸವದ ಸಂದರ್ಭ ಸಿಸಿಟಿವಿಯು ಪರ್ವತ ಪ್ರದೇಶದ ಮೇಲ್ಭಾಗದಲ್ಲಿ ಬಾಂಬರ್ ವಿಮಾನದ ಹಾರಾಟವನ್ನು ಪ್ರಸಾರ ಮಾಡಿದ್ದು ಇದು ಹಿಮಾಲಯ ಪರ್ವತ ಎಂದಿದೆ. ಈ ಬಾಂಬರ್ ವಿಮಾನದಲ್ಲಿ ಭೂಮಿಗೆ ಅಪ್ಪಳಿಸಬಲ್ಲ ಕೆಡಿ-63 ಕ್ರೂಸ್ ಕ್ಷಿಪಣಿಗಳನ್ನು ಅಳವಡಿಸಲಾಗಿದ್ದು ಇದರ ವ್ಯಾಪ್ತಿ 200 ಕಿ.ಮೀ ಎಂದು ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’  ವರದಿ ಮಾಡಿದೆ. ಈ ಬೆಳವಣಿಗೆ ನಿಶ್ಚಿತವಾಗಿಯೂ ಭಾರತಕ್ಕೆ ಒಂದು ಎಚ್ಚರಿಕೆಯಾಗಿದೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.

ಹೊಸದಿಲ್ಲಿಯು ಎಚ್-6ಕೆಯ ವ್ಯಾಪ್ತಿ ಕ್ಷೇತ್ರದಲ್ಲಿದೆ ಮತ್ತು ಸಿಜೆ-20ರ ಹೊಡೆತದ ವ್ಯಾಪ್ತಿಯೊಳಗಿದೆ ಎಂದು ಸೇನಾ ವೀಕ್ಷಕ ಆ್ಯಂಟನಿ ವಾಂಗ್ ಹೇಳಿದ್ದಾರೆ. ಆದರೆ ಚೀನಾವು ನಾಗರಿಕ ಪ್ರದೇಶದ ಮೇಲೆ ದಾಳಿ ಮಾಡದು. ಆದ್ದರಿಂದ ದಿಲ್ಲಿಯು ಆಕಾಶದಿಂದ ಉಡಾಯಿಸಬಹುದಾದ ಕ್ಷಿಪಣಿಯ ಗುರಿ ಆಗಲಿಕ್ಕಿಲ್ಲ ಎಂದು ಚೀನಾ ಸೇನೆಯ ಮಾಜಿ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಚೀನಾದ ಟಿವಿ ವಾಹಿನಿ ಪ್ರಸಾರ ಮಾಡಿದ ವೀಡಿಯೊ ದೃಶ್ಯ ಇತ್ತೀಚಿನ ವಿದ್ಯಮಾನವಾಗಿರುವ ಸಾಧ್ಯತೆಯಿಲ್ಲ. ಯಾಕೆಂದರೆ, ವೀಡಿಯೊ ದೃಶ್ಯದ ಹಿನ್ನೆಲೆಯಲ್ಲಿ ಕಂಡುಬರುವಷ್ಟು ಪ್ರಮಾಣದ ಮಂಜು ಹಿಮಾಲಯದಲ್ಲಿ ನವೆಂಬರ್‌ನಲ್ಲಿ ಇರುವುದಿಲ್ಲ ಎಂದು ಅಂಕಣಕಾರ ಆದಿಲ್ ಬ್ರಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News