ಮುಂದಿನ ವಾರ ಖತರ್‌ನಲ್ಲಿ ಅಮೆರಿಕ-ತಾಲಿಬಾನ್ ಮಾತುಕತೆ

Update: 2021-11-24 18:29 GMT

ವಾಷಿಂಗ್ಟನ್, ನ.24: ಮುಂದಿನ ವಾರ ಖತರ್‌ನಲ್ಲಿ ಅಮೆರಿಕ-ತಾಲಿಬಾನ್ ನಡುವಿನ ಮಾತುಕತೆ ಮುಂದುವರಿಯಲಿದೆ ಎಂದು ಅಮೆರಿಕದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿರುವ ಮಾನವೀಯ ಬಿಕ್ಕಟ್ಟಿನ ಪರಿಸ್ಥಿತಿ ಹಾಗೂ ಆ ದೇಶವನ್ನು ಭಯೋತ್ಪಾದನೆಯ ಉಡ್ಡಯನ ನೆಲೆಯನ್ನಾಗಿಸದಂತೆ ಖಾತರಿ ಪಡಿಸುವ ಕ್ರಮಗಳ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ. ಅಫ್ಘಾನಿಸ್ತಾನಕ್ಕೆ ಅಮೆರಿಕದ ವಿಶೇಷ ಪ್ರತಿನಿಧಿ ಟಾಮ್ ವೆಸ್ಟ್ ಅಮೆರಿಕ ನಿಯೋಗದ ನೇತೃತ್ವ ವಹಿಸಲಿದ್ದು 2 ವಾರ ಮಾತುಕತೆ ಮುಂದುವರಿಯುವ ನಿರೀಕ್ಷೆಯಿದೆ.

ವೆಸ್ಟ್ ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ತಾಲಿಬಾನ್ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಇದಕ್ಕೂ ಮುನ್ನ ಅವರು ಖತರ್‌ನಲ್ಲಿ ತಾಲಿಬಾನ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ಸಂದರ್ಭ ತಾಲಿಬಾನ್ ಸರಕಾರದೊಂದಿಗೆ ಅನಧಿಕೃತ ರಾಜಕೀಯ ಸಂಬಂಧ ಸ್ಥಾಪಿಸುವ ಕುರಿತು ಚರ್ಚೆ ನಡೆದಿದೆ ಎಂದು ವರದಿಯಾಗಿದೆ.

ಅಫ್ಘಾನಿಸ್ತಾನದ ವಿಷಯಕ್ಕೆ ಸಂಬಂಧಿಸಿ ನಮ್ಮ ಪ್ರಮುಖ ಹಿತಾಸಕ್ತಿಯ ಕುರಿತು ಚರ್ಚೆ ನಡೆಯಲಿದೆ. ಭಯೋತ್ಪಾದನೆ ನಿಗ್ರಹ ಕ್ರಮ, ಅಮೆರಿಕದ ಪ್ರಜೆಗಳು ಹಾಗೂ ನಾವು ವಿಶೇಷ ಬದ್ಧತೆ ಹೊಂದಿರುವ ಅಫ್ಗಾನಿಸ್ತಾನದ ಪ್ರಜೆಗಳ ಸುರಕ್ಷಿತ ಪ್ರಯಾಣಕ್ಕೆ ಅವಕಾಶ, ಮಾನವೀಯ ನೆರವಿನ ಪೂರೈಕೆ ವ್ಯವಸ್ಥೆ, ಅಫ್ಘಾನ್‌ನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಯಲಿದೆ ಎಂದು ಪ್ರೈಸ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಅಮೆರಿಕವು ತಾಲಿಬಾನ್ ಸರಕಾರಕ್ಕೆ ಅಧಿಕೃತ ಮಾನ್ಯತೆ ನೀಡಿಲ್ಲ. ಆದರೆ ಅಫ್ಗಾನಿಸ್ತಾನದಲ್ಲಿ ತನ್ನ ರಾಜಕೀಯ ಪ್ರತಿನಿಧಿಯಾಗಿ ಖತರ್ ಕಾರ್ಯನಿರ್ವಹಿಸಲಿದೆ ಎಂದು ನವೆಂಬರ್‌ನಲ್ಲಿ ಅಮೆರಿಕ ಘೋಷಿಸಿದೆ. ಅಮೆರಿಕ ಮುಂದಿನ ದಿನದಲ್ಲಿ ತಾಲಿಬಾನ್‌ನೊಂದಿಗೆ ವಿಸ್ತತ ಮಾತುಕತೆ ನಡೆಸಲಿದೆ, ಆದರೆ ಈಗ ಮಾನವೀಯ ನೆರವು ಮಾತ್ರ ಒದಗಿಸಲಾಗುವುದು ಎಂದು ಕಳೆದ ವಾರ ಅಮೆರಿಕ ಸ್ಪಷ್ಟಪಡಿಸಿತ್ತು.

ಭಯೋತ್ಪಾದನೆಗೆ ನೆರವು ನೀಡಬಾರದು, ಎಲ್ಲರನ್ನೂ ಒಳಗೊಂಡ ಸರಕಾರ ರಚನೆಯಾಗಬೇಕು, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಹಕ್ಕುಗಳನ್ನು ಗೌರವಿಸಬೇಕು ಮತ್ತು ಶಿಕ್ಷಣ, ಉದ್ಯೋಗದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಿದರೆ ಮಾತ್ರ ತಾಲಿಬಾನ್ ಸರಕಾರಕ್ಕೆ ಮಾನ್ಯತೆ ನೀಡುವುದಾಗಿ ಅಮೆರಿಕ ಹಲವು ಬಾರಿ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News