ದೇಶದಲ್ಲಿ ಪುರುಷರ ಸಂಖ್ಯೆ ಮೀರಿದ ಮಹಿಳೆಯರು

Update: 2021-11-25 01:37 GMT

ಹೊಸದಿಲ್ಲಿ: ಭಾರತದಲ್ಲಿ ಈಗ ಪ್ರತಿ 1000 ಪುರುಷರಿಗೆ 1020 ಮಹಿಳೆಯರಿದ್ದಾರೆ. ಭಾರತ ಮತ್ತಷ್ಟು ’ಯುವ’ ವಾಗುತ್ತಿಲ್ಲ ಹಾಗೂ ದೇಶದಲ್ಲಿ ಜನಸಂಖ್ಯಾ ಸ್ಫೋಟದ ಅಪಾಯ ಇಲ್ಲ!

ನವೆಂಬರ್ 24ರಂದು ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಐದನೇ ಸುತ್ತಿನ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್)ಯ ಸಾರಾಂಶದಲ್ಲಿ ಈ ಕುತೂಹಲಕರ ಅಂಶಗಳು ಬಹಿರಂಗಗೊಂಡಿವೆ. ಎನ್‌ಎಫ್‌ಎಚ್‌ಎಸ್ ವಾಸ್ತವವಾಗಿ ಮಾದರಿ ಸಮೀಕ್ಷೆಯಾಗಿದ್ದು, ಇದನ್ನು ವಿಸ್ತೃತ ಜನಸಮುದಾಯಕ್ಕೂ ಅನ್ವಯಿಸಬಹುದೇ ಎನ್ನುವುದು ಮುಂದಿನ ರಾಷ್ಟ್ರೀಯ ಸಮೀಕ್ಷೆಯಿಂದ ತಿಳಿದು ಬರಲಿದೆ. ದೇಶದ ಬಹುತೇಕ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದೇ ಪ್ರವೃತ್ತಿ ಕಂಡುಬರುವ ಸಾಧ್ಯತೆ ಇದೆ.

ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ 1990ರಲ್ಲಿ ನ್ಯೂಯಾರ್ಕ್ ರಿವ್ಯೆ ಆಫ್ ಬುಕ್ಸ್‌ನಲ್ಲಿ ಬರೆದ ಒಂದು ಪ್ರಬಂಧದಲ್ಲಿ ಉಲ್ಲೇಖಿಸಿದಂತೆ ಭಾರತ ಇದೀಗ "ಮಹಿಳೆಯರು ನಾಪತ್ತೆಯಾದ" ದೇಶವಾಗಿ ಉಳಿದಿಲ್ಲ. ಆ ವೇಳೆಗೆ ಭಾರತದಲ್ಲಿ 1000 ಪುರುಷರಿಗೆ 927 ಮಹಿಳೆಯರು ಮಾತ್ರ ಇದ್ದರು. 2005-06ರಲ್ಲಿ ನಡೆದ ಎನ್‌ಎಫ್‌ಎಚ್‌ಎಸ್-3ನಲ್ಲಿ ಈ ಅನುಪಾತ ಸಮಾನವಾಗಿತ್ತು. 2015-16ರಲ್ಲಿ ನಡೆಸಿದ ಎನ್‌ಎಫ್‌ಎಚ್‌ಎಸ್-4ನಲ್ಲಿ ಇದು 991:1000 ಆಗಿತ್ತು. ಇದೇ ಮೊದಲ ಬಾರಿಗೆ ಎನ್‌ಎಫ್‌ಎಚ್‌ಎಸ್ ಅಥವಾ ಜನಗಣತಿಯಲ್ಲಿ ಲಿಂಗಾನುಪಾತ ಮಹಿಳೆಯರ ಪರವಾಗಿ ಬೆಳೆದಿದೆ.

"ಸುಧಾರಿಸಿದ ಲಿಂಗಾನುಪಾತ ಮತ್ತು ಹುಟ್ಟಿನ ವೇಳೆಯ ಲಿಂಗಾನುಪಾತ ಮಹತ್ವದ ಸಾಧನೆ. ವಾಸ್ತವ ಚಿತ್ರಣ ಜನಗಣತಿಯಿಂದ ತಿಳಿದು ಬರಬೇಕಿದ್ದರೂ, ಈ ಫಲಿತಾಂಶಗಳ ಆಧಾರದಲ್ಲಿ, ಮಹಿಳಾ ಸಬಲೀಕರಣಕ್ಕೆ ನಾವು ಕೈಗೊಂಡ ಕ್ರಮಗಳು ಸರಿಯಾದ ದಿಕ್ಕಿನಲ್ಲಿ ಚಲಿಸುತ್ತಿವೆ ಎನ್ನುವುದು ತಿಳಿಯುತ್ತದೆ" ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ವಿಕಾಸ್ ಶೀಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News