2013ರ ಮುಂಬೈ ಗ್ಯಾಂಗ್ ರೇಪ್ ಕೇಸ್: ಮರಣದಂಡನೆ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿದ ಹೈಕೋರ್ಟ್

Update: 2021-11-25 07:35 GMT

ಮುಂಬೈ: ಸೆಂಟ್ರಲ್ ಮುಂಬೈನ ಶಕ್ತಿ ಮಿಲ್ಸ್ ಕಾಂಪೌಂಡ್‌ನಲ್ಲಿ 2013ರಲ್ಲಿ 22 ವರ್ಷದ ಫೋಟೋ ಜರ್ನಲಿಸ್ಟ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಬಾಂಬೆ ಹೈಕೋರ್ಟ್ ಇಂದು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದೆ. ಅವರು ಮಾಡಿದ ಅಪರಾಧಕ್ಕೆ ಪಶ್ಚಾತ್ತಾಪ ಪಡಲು ಜೀವಾವಧಿ ಶಿಕ್ಷೆಗೆ ಅವರು ಅರ್ಹರಾಗಿದ್ದಾರೆ" ಎಂದಿದೆ.

ನ್ಯಾಯಮೂರ್ತಿಗಳಾದ ಸಾಧನಾ ಜಾಧವ್ ಹಾಗೂ  ಪೃಥ್ವಿರಾಜ್ ಚವಾಣ್ ಅವರ ವಿಭಾಗೀಯ ಪೀಠವು ವಿಜಯ್ ಜಾಧವ್, ಮುಹಮ್ಮದ್ ಖಾಸಿಮ್ ಶೇಖ್ ಮತ್ತು ಮುಹಮ್ಮದ್ ಅನ್ಸಾರಿ ಅವರಿಗೆ ವಿಧಿಸಿದ ಮರಣದಂಡನೆಯನ್ನು ದೃಢೀಕರಿಸಲು ನಿರಾಕರಿಸಿತು ಹಾಗೂ  ಅಪರಾಧಿಗಳ ಉಳಿದ ಜೀವಿತಾವಧಿಯಲ್ಲಿ ಅವರ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿತು.

ಅಪರಾಧವು ಸಮಾಜದ ಸಾಮೂಹಿಕ ಆತ್ಮಸಾಕ್ಷಿಯನ್ನು ಆಘಾತಗೊಳಿಸಿದೆ ಹಾಗೂ ಅತ್ಯಾಚಾರವು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಆದರೆ ಮರಣದಂಡನೆಯನ್ನು ಹಿಂಪಡೆಯಲಾಗದು ಎಂಬ ಅಂಶವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಪೀಠವು ತನ್ನ ಆದೇಶವನ್ನು ಪ್ರಕಟಿಸಿತು.

"ಸಾವು ಪಶ್ಚಾತ್ತಾಪದ ಪರಿಕಲ್ಪನೆಯನ್ನು ಕೊನೆಗೊಳಿಸುತ್ತದೆ. ಆರೋಪಿಗಳು ಕೇವಲ ಮರಣದಂಡನೆಗೆ ಅರ್ಹರು ಎಂದು ಹೇಳಲಾಗುವುದಿಲ್ಲ. ಅವರು ಮಾಡಿದ ಅಪರಾಧಕ್ಕೆ ಪಶ್ಚಾತ್ತಾಪ ಪಡಲು ಅವರು ಜೀವಾವಧಿ ಶಿಕ್ಷೆಗೆ ಅರ್ಹರು" ಎಂದು ಪೀಠ ಹೇಳಿದೆ.

ಅಪರಾಧಿಗಳು ಸಮಾಜದಲ್ಲಿ ಒಗ್ಗೂಡಲು ಅನುಮತಿಸಲಾಗದ ಕಾರಣ ಹಾಗೂ ಸುಧಾರಣೆಗೆ ಯಾವುದೇ ಅವಕಾಶವಿಲ್ಲದ ಕಾರಣ ಪೆರೋಲ್ ಅಥವಾ ಫರ್ಲೋಗೆ ಅರ್ಹರಾಗಿರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News