ಸಂಘ ಪರಿವಾರದಿಂದ ವಿದ್ಯಾರ್ಥಿಗಳ ಕೈಗೆ ಆಯುಧಗಳನ್ನು ನೀಡಿ ಕೋಮುಗಲಭೆಗೆ ಪ್ರಚೋದನೆ: ಸಿಎಫ್‌ಐ

Update: 2021-11-25 08:45 GMT

ಪುತ್ತೂರು, ನ.25: ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ಇಲ್ಲವಾದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್‌ಐ) ವತಿಯಿಂದ ‘ಪುತ್ತೂರು ಚಲೋ’ ಪ್ರತಿಭಟನೆ ನಡೆಸಲಾಗುವುದು ಎಂದು ಸಿಎಫ್‌ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ ಎಚ್ಚರಿಸಿದ್ದಾರೆ.

ಅವರು ಗುರುವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊಂಬೆಟ್ಟು ಕಾಲೇಜಿನಲ್ಲಿ ನಡೆದ ಪ್ರಕರಣವನ್ನು ಗಮನಿಸಿದರೆ ಸಂಘ ಪರಿವಾರವು ವಿದ್ಯಾರ್ಥಿಗಳ ಕೈಗೆ ಆಯುಧಗಳನ್ನು ಕೊಟ್ಟು ಕೋಮುಗಲಭೆಗೆ ಪ್ರಚೋದನೆ ನೀಡುತ್ತಿರುವುದು ಸ್ಪಷ್ಟವಾಗುತ್ತದೆ. ಹೀಗೆಲ್ಲಾ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮೌನವಾಗಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಹಲ್ಲೆ ನಡೆಸಿದ ಆರೋಪಿಗಳ ಮೇಲೆ ಈ ತನಕ ಕೇಸು ದಾಖಲಿಸಲಾಗಿಲ್ಲ. ಈ ಘಟನೆಗಳ ಬಗ್ಗೆ ಸೂಕ್ತ ತನಿಖೆ ನಡೆಸಲು ಉನ್ನತ ಅಧಿಕಾರಿಗಳನ್ನು ನೇಮಿಸಬೇಕು. ತ್ರಿಶೂಲದಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಿ ಸೂಕ್ತ ಶಿಕ್ಷೆ ನೀಡಿ ಅಮಾಯಕ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು. ಆರೋಪಿಗಳನ್ನು ತಕ್ಷಣವೇ ಬಂಧಿಸದಿದ್ದಲ್ಲಿ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಪುತ್ತೂರು ಚಲೋ ನಡೆಸಲಾಗುವುದು ಎಂದರು ತಿಳಿಸಿದರು.

ವಿದ್ಯಾರ್ಥಿಗಳ ಮೇಲೆ ಹಲ್ಲೆ, ತ್ರಿಶೂಲ ದಾಳಿ, ಬೆದರಿಕೆ ಹಾಕಲು ಸಂಘ ಪರಿವಾರದ ಅರುಣ್ ಕುಮಾರ್ ಪುತ್ತಿಲ ಮತ್ತು ಚಿನ್ಮಯ ಈಶ್ವರಮಂಗಲ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ನ.19ರಂದು ನಡೆಸಿದ ಸಭೆಯಲ್ಲಿ ಮಾಡಿದ ಪ್ರಚೋದನಕಾರಿ ಭಾಷಣವೇ ಕಾರಣ ಇದರಿಂದಾಗಿ ಕೊಂಬೆಟ್ಟು ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿ ನಾಲ್ಕು ಹಲ್ಲೆ ಪ್ರಕರಣಗಳು ನಡೆದಿದೆ. ಈ ಹಿನ್ನಲೆಯಲ್ಲಿ ಹಲ್ಲೆ ನಡೆಸಿದ ವಿದ್ಯಾರ್ಥಿಗಳ ಜೊತೆಗೆ ಪ್ರಚೋದನೆ ನೀಡಿದವರನ್ನೂ ಬಂಧಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಎಫ್‌ಐ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಜಿಲ್ಲಾ ಮುಖಂಡ ರಿಯಾರ್ ಅಂಕತಡ್ಕ, ಜಿಲ್ಲಾ ಕಾರ್ಯದರ್ಶಿ ಮುಸ್ತಫ ಕೊಡಿಪ್ಪಾಡಿ, ಜಿಲ್ಲಾ ಸಮಿತಿ ಸದಸ್ಯ ಫಾರೂಕ್ ಕಬಕ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News