ಅತ್ಯಾಚಾರಿಗಳನ್ನು ಗುಂಡಿಕ್ಕಿ ಸಾಯಿಸಿ: ಪ್ರತಿಭಾ ಕುಳಾಯಿ

Update: 2021-11-25 09:26 GMT

ಮಂಗಳೂರು, ನ.25: ದೇಶದ ಕಾನೂನು ಮಹಿಳೆಯರ ಪರವಾಗಿಲ್ಲ. ಹಾಗಾಗಿ ಹೆಣ್ಮಕ್ಕಳನ್ನು ಅತ್ಯಾಚಾರಗೈದು ಕೊಲೆ ಮಾಡುವ ಕಿರಾತಕರನ್ನು ಕಂಡಲ್ಲಿ ಗುಂಡಿಕ್ಕಿ ಸಾಯಿಸಬೇಕು. ಅಂಥವರಿಗೆ ಬದುಕುವ ಯಾವುದೇ ಹಕ್ಕಿಲ್ಲ ಎಂದು ಮಾಜಿ ಕಾರ್ಪೊರೇಟರ್, ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ಞಾವಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20 ದಿನದ ಹಿಂದೆ ಎರಡು ವರ್ಷದ ಹೆಣ್ಣು ಮಗುವನ್ನು ಅತ್ಯಾಚಾರ ಮಾಡಿ, ಕೊಲೆಗೈಯ್ಯುವ ಯತ್ನ ನಡೆಸಲಾಗಿತ್ತು. ಆಗ ನಾವ್ಯಾರೂ ಪ್ರತಿಭಟಿಸಿಲ್ಲ. ಇದೀಗ ಎರಡನೇ ಮುಗ್ಧ ಮಗು ಅತ್ಯಾಚಾರಿಗಳಿಗೆ ಬಲಿಯಾಗಿದೆ. ನಾವು ದನಿ ಎತ್ತದಿದ್ದರೆ ಇನ್ನಷ್ಟು ಹೆಣ್ಮಕ್ಕಳು ಬಲಿಯಾಗುವ ಸಾಧ್ಯತೆ ಇದು ಆತಂಕ ವ್ಯಕ್ತಪಡಿಸಿದರು.

ಉಳಾಯಿಬೆಟ್ಟುವಿನ ಪರಾರಿಯಲ್ಲಿ 8 ವರ್ಷದ ಬಾಲಕಿಯನ್ನು ಅತ್ಯಾಚಾರ ನಡೆಸಿ, ಕೊಲೆಗೈದವರನ್ನು ಬಂಧಿಸಿದ ಪೊಲೀಸ್ ಕಮಿಷನರ್ ಹಾಗೂ ತಂಡವನ್ನು ಅಭಿನಂದಿಸುತ್ತೇನೆ. ಕೇವಲ ಆರೋಪಿಗಳನ್ನು ಬಂಧಿಸಿದರೆ ಸಾಲದು, ಆರೋಪಿಗಳಿಗೆ ನ್ಯಾಯಾಲಯ ಶೀಘ್ರ ಹಾಗೂ ಕಠಿಣ ಶಿಕ್ಷೆ ವಿಧಿಸಬೇಕು. ಇದಕ್ಕಾಗಿ ಜನಜಾಗೃತಿ, ಹೋರಾಟದ ಅಗತ್ಯವಿದೆ ಎಂದು ಪ್ರತಿಭಾ ಕುಳಾಯಿ ಅಭಿಪ್ರಾಯಿಸಿದರು.

ಸಾವನ್ನಪ್ಪಿದ ಮಗುವಿಗೆ ನ್ಯಾಯ ಕೊಡಲು ನಮ್ಮಿಂದ ಸಾಧ್ಯವಿಲ್ಲ, ಅದು ಜೀವತೆತ್ತಾಗಿದೆ. ಆದರೆ ಇಂಥ ಘಟನೆ ಮರುಕಳಿಸಬಾರದು. ಅದಕ್ಕಾಗಿ ಜಿಲ್ಲಾಡಳಿತ ಮತ್ತು ಜನತೆ ಕಠಿಣ ನಿರ್ಧಾರಕ್ಕೆ ಬರಬೇಕು. ದೇಶಕ್ಕೆ ಮಾದರಿಯಾದ ಸಂದೇಶ ಕೊಡಬೇಕು. ಅನ್ಯ ಕೋಮಿನವರಿಂದ ಅತ್ಯಾಚಾರ, ಕೊಲೆಯಾದರೆ ರಾಜಕೀಯ ಲಾಭಕ್ಕಾಗಿ ದನಿ ಎತ್ತುವವರು ಕೂಡಾ ಈ ಬಡ ಹೆಣ್ಮಕ್ಕಳ ಪರ ನ್ಯಾಯಕ್ಕಾಗಿ ಹೋರಾಟ ನಡೆಸಬೇಕು. ಹೆತ್ತವರ ಬೇಜವಾಬ್ದಾರಿಯಿಂದ ಪರಾರಿ ಘಟನೆ ನಡೆದಿದ್ದು, ಹೆತ್ತವರು ಕೂಡಾ ತಮ್ಮ ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಪ್ರತಿಭಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News