‘ನನ್ನ ಪರಿಸ್ಥಿತಿ ಯಾರಿಗೂ ಬರದಿರಲಿ: ದುಬಾರಿ ಬೈಕೊಂದರ ರೋದನ!

Update: 2021-11-25 09:41 GMT

ಮಂಗಳೂರು, ನ.25: "ನನ್ನ ಹೆಸರು ಬಜಾಜ್ ಕೆಟಿಎಂ ಡ್ಯೂಕ್. 2016ರಲ್ಲಿ ನನ್ನ ಮಾಲಕ ನನ್ನನ್ನು ಖರೀದಿಸಿದ್ದ. ಆದರೆ ಕಳೆದೆರಡು ವರ್ಷಗಳಿಂದ ನನಗೆ ಇನ್ಶೂರೆನ್ಸ್ ಮಾಡಿಸಿರಲಿಲ್ಲ. ಹೀಗಿರುವಾಗ 4-10-2021ರಂದು ನನ್ನ ಮೇಲೆ ಇಬ್ಬರು ಕುಳಿತುಕೊಂಡು ಹೋಗುವಾಗ ಅಪಘಾತವಾಗಿ ಅವರಿಬ್ಬರೂ ಮರಣ ಹೊಂದಿರುತ್ತಾರೆ. ಈಗ ನನ್ನನ್ನು ಪೊಲೀಸ್ ಠಾಣೆಯಲ್ಲಿ ಹರಾಜಿಗೆ ಇಡಲಾಗಿದೆ. ನನ್ನ ಪರಿಸ್ಥಿತಿ ಬೇರೆ ಯಾರಿಗೂ ಬರದಿರಲಿ".

ಹೀಗೊಂದು ದ್ವಿಚಕ್ರ ವಾಹನದ ರೋದನದ ಬರಹ ಕಂಡುಬಂದಿದ್ದು, ನಗರದ ಪುರಭವನದ ಆವರಣದಲ್ಲಿರುವ ಮಿನಿ ಸಭಾಂಗಣದ ಹೊರಗಡೆ. ತನ್ನ ಕೊರಳ ಪಟ್ಟಿಯಲ್ಲಿ ಇಂತಹ ಬರಹವನ್ನು ಹೊತ್ತು ಅನಾಥವಾಗಿ ಕಂಡುಬಂದ ಈ ಬೈಕ್ ಅಪಘಾತದ ಗಂಭೀರತೆಯ ಜತೆಗೆ, ಲಕ್ಷಾಂತರ ಖರ್ಚು ಮಾಡಿ ಖರೀದಿಸಿದ ಬೈಕ್‌ನ ಪ್ರಸಕ್ತ ಪರಿಸ್ಥಿತಿಯನ್ನೂ ಸಾರ್ವಜನಿಕರಿಗೆ ತಿಳಿಸುವಂತಿತ್ತು.

ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರ ಆಶಯದಂತೆ ಪೊಲೀಸ್ ಇಲಾಖೆಯ ವಿವಿಧ ಸೇವಾ ಘಟಕಗಳಾದ ಪೊಲೀಸ್ ಬ್ಯಾಂಡ್, ಅಪರಾಧ ಪತ್ತೆ ವಿಭಾಗ, ಸೈಬರ್ ಕ್ರೈಂ, ಸಂಚಾರಿ ಘಟಕ, ಡ್ರಗ್ಸ್ ಮತ್ತು ನಾರ್ಕೋಟಿಕ್ಸ್ ಘಟಕ, ನಗರ ಸಶಸ್ತ್ರ ಘಟಕ, ಶ್ವಾನದಳ, ಅಗ್ನಿಶಾಮಕ ದಳಗಳ ಕುರಿತು ಅರಿತುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪತ್ತೆ ಮಾಡಲಾದ ಕಳವಾದ ಸೊತ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಪತ್ತೆ ಮಾಡಿದ ಸೊತ್ತುಗಳಲ್ಲಿ ನಗದು, ಚಿನ್ನಾಭರಣ, ಚಿನ್ನದ ಗಟ್ಟಿಯೂ ಸೇರಿತ್ತು.

ಕಳವಿನ ಒಂದೂವರೆ ಗಂಟೆಯಲ್ಲೇ ಆರೋಪಿ ಪತ್ತೆ!

ಸುಮಾರು ನಾಲ್ಕು ತಿಂಗಳ ಹಿಂದೆ ತಮ್ಮ ಮನೆಯಿಂದ ಸುಮಾರು 90 ಗ್ರಾಂ ಚಿನ್ನಾಭರಣ ಕಳವಾಗಿತ್ತು. ಘಟನೆಯಾಗಿ ಪೊಲೀಸರಿಗೆ ದೂರು ನೀಡಿದ ಒಂದೂವರೆ ಗಂಟೆಯಲ್ಲೇ ಆರೋಪಿಯನ್ನು ಪೊಲೀಸರು ಕಳವಾದ ಸೊತ್ತಿನೊಂದಿಗೆ ಪತ್ತೆ ಹಚ್ಚಿದ್ದರು ಎಂದು ಇಂದು ಕಳವಾದ ಸೊತ್ತನ್ನು ಮರಳಿ ಪಡೆಯಲು ಬಂದಿದ್ದ ಸುರತ್ಕಲ್ ಮದ್ಯ ನಿವಾಸಿ ಬಾಬು ದೇವಾಡಿಗ ಹೇಳಿದರು.

ಕಳವಾದ ವಸ್ತು ಮರಳಿ ಸಿಕ್ಕರೂ ನೋಡಲು ತಂದೆಯೇ ಇಲ್ಲ!

2020ರ ನವೆಂಬರ್ 26ರಂದು ಬಿಜೈ ಕಾಪಿಕಾಡ್ ನಿವಾಸಿ ಗುಣಪಾಲ್ ಎಂಬವರು ಸಂಜೆ ಕೆಎಸ್ಸಾರ್ಟಿಸಿ ಬಸ್ ಮೂಲಕ ಮಡಿಕೇರಿಗೆ ಪ್ರಯಾಣಕ್ಕೆ ಮುಂದಾಗಿದ್ದ ಸಂದರ್ಭ ದಾರಿಮಧ್ಯೆ ಅವರ ಮೇಲೆ ಹಲ್ಲೆ ನಡೆಸಿ ಅವರಲ್ಲಿದ್ದ ಚಿನ್ನಾಭರಣವನ್ನು ಕಳವು ಮಾಡಲಾಗಿತ್ತು. ಎರಡು ತಿಂಗಳ ಹಿಂದೆ ಕಳವಾದ ಸೊತ್ತು ಪತ್ತೆಯಾಗಿದ್ದು, ಇದೀಗ ನ್ಯಾಯಾಲಯದ ಸಮ್ಮತಿಯ ಬಳಿಕ ಇಂದು ನಮಗೆ ಆ ಚಿನ್ನಾಭರಣ ವಾಪಾಸಾಗಿದೆ. ಆದರೆ ಅಂದು ಹಲ್ಲೆಗೊಳಗಾಗಿದ್ದ ತಂದೆ ಕೆಲ ಸಮಯದ ಹಿಂದೆ ನಮ್ಮನ್ನಗಲಿದ್ದಾರೆ ಎನ್ನುತ್ತಾ ತಮ್ಮ ತಂದೆಯಿಂದ ಕಳವಾದ ವಸ್ತುವನ್ನು ಮರಳಿ ಪಡೆಯಲು ಬಂದಿದ್ದ ಪುತ್ರಿ ಪೂಜಿತಾ ಬೇಸರದಿಂ ನುಡಿದರು.

ದುರ್ಘಟನೆ ವೇಳೆ ಕ್ಲಪ್ತ ಸಮಯದಲ್ಲಿ ಪೊಲೀಸರು ಬರುವುದಿಲ್ಲ ಎಂಬುದು ನನ್ನ ಪಾಲಿಗೆ ಸುಳ್ಳಾಗಿತ್ತು. ನಮ್ಮ ಮನೆಯಲ್ಲಿ ಮಾರ್ಚ್‌ನಲ್ಲಿ ರಾತ್ರಿ ಕಳವು ನಡೆದು 15 ಪವನ್ ಚಿನ್ನ, 2 ಮೊಬೈಲ್ ಫೋನ್, ಐದು ಸಾವಿರ ರೂ. ನಗದು ಕಳವಾಗಿತ್ತು. ನಮಗೆ ಎಚ್ಚರ ಆಗಿ ಕಳವಾಗಿರುವ ಬಗ್ಗೆ ದೂರು ನೀಡೋಣವೆಂದರೆ ಮೊಬೈಲೇ ಇರಲಿಲ್ಲ. ಕೊನೆಗೆ ಪಕ್ಕದ ಮನೆಯವರ ಸಹಾಯದಿಂದ ಪೊಲೀಸ್ ಠಾಣೆಗೆ ಕರೆ ಮಾಡಿದ 5 ನಿಮಿಷಗಳಲ್ಲೇ ಉಳ್ಳಾಲ ಠಾಣೆಯ ಪೊಲೀಸರು ನಮ್ಮ ಮನೆಯ ಬಾಗಿಲ ಮುಂದಿದ್ದರು. ಅಂದು ಕಳವಿನ ಎಲ್ಲಾ ಮಾಹಿತಿಯನ್ನು ಪೊಲೀಸರು ಪಡೆದುಕೊಂಡು ಹೋಗಿದ್ದರು. ನಾವು ಮೂರು ತಿಂಗಳ ಹೊತ್ತಿಗಾಗಲೇ ಅದೆಲ್ಲವನ್ನೂ ಮರೆತಿದ್ದೆವು. ಆದರೆ ಅದೊಂದು ದಿನ ಪೊಲೀಸರು ಕರೆ ಮಾಡಿ ಕಳವಾದ ಸೊತ್ತು ಪತ್ತೆಯಾಗಿರುವ ಬಗ್ಗೆ ತಿಳಿಸಿದ್ದು, ಇಂದು ಅದನ್ನು ಹಸ್ತಾಂತರಿಸಿದ್ದಾರೆ. ಇದು ಪೊಲೀಸರ ಕರ್ತವ್ಯದ ಬಗ್ಗೆ ವಿಶ್ವಾಸಕ್ಕೆ ಕಾರಣವಾಗಿದೆ ಎಂದು ಧನಲಕ್ಷ್ಮಿಹೇಳಿದರು.

ಈ ಸಂದರ್ಭ ಕಳವಾದ ಸೊತ್ತುಗಳನ್ನು ವಾರಸುದಾರರಿಗೆ ಮರಳಿಸಲಾಯಿತು.

ಪವರ್ ಲಿಫ್ಟಿಂಗ್ ಚಾಂಪಿಯನ್, ಸೈಬರ್ ಕ್ರೈಂ ಸಿಬ್ಬಂದಿ ವಿಜಯ ಕಾಂಚನ್ ಮತ್ತು ಈಜು ಚಾಂಪಿಯನ್ ಚಿಂತನ್ ಶೆಟ್ಟಿ ಇವರವನ್ನು ಸನ್ಮಾನಿಸಲಾಯಿತು.

ಡಿಸಿಪಿ ದಿನೇಶ್ ಕುಮಾರ್, ನಗರ ಶಸಸ್ತ್ರಪಡೆಯ ಡಿಸಿಪಿ ಚೆನ್ನಬಸಪ್ಪ ಬಸಪ್ಪ ಹಡಪದ, ಎಸಿಪಿ ದಕ್ಷಿಣ ರಂಜಿತ್ ಬಂಡಾರು ಇದ್ದರು. ಬರ್ಕೆ ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗಂ ಕಾರ್ಯಕ್ರಮ ನಿರೂಪಿಸಿದರು. ಡಿಸಿಪಿ ಹರಿರಾಂ ಶಂಕರ್ ವಂದಿಸಿದರು.


ಪೊಲೀಸ್ ಇಲಾಖೆಯ ವಿವಿಧ ವೈವಿಧ್ಯಗಳ ಪ್ರದರ್ಶನದಲ್ಲಿ ಶ್ವಾನದಳದ ಪ್ರಮುಖ ಆಕರ್ಷಣೆ ಡಿಟೆಕ್ವಿಟ್ ಗೀತಾಳಿಗೆ ಭಾರೀ ಡಿಮ್ಯಾಂಡ್! ಸುಂದರ ಧಿರಿಸಿನೊಂದಿಗೆ ಟೇಬಲ್ ಮೇಲೆ ಬಾಲ ಅಲ್ಲಾಡಿಸುತ್ತಾ ಆಸೀನಳಾಗಿದ್ದ ಗೀತಾಳ ಮೈ ಮುಟ್ಟವ ಜತೆಗೆ ಕಾಲೇಜು ವಿದ್ಯಾರ್ಥಿಗಳು ಸೆಲ್ಫಿಯನ್ನೂ ಕ್ಲಿಕ್ಕಿಸಿದರು.


ಜನತೆಯ ನಂಬಿಕೆ ಉಳಿಸುವ ಕಾರ್ಯ: ಡಾ.ರಾಜೇಂದ್ರ ಕೆ.ವಿ.

ಕಳವಾದ ಸೊತ್ತುಗಳನ್ನು ಪತ್ತೆಹಚ್ಚಿ ಮರಳಿಸುವ ಮೂಲಕ ಪೊಲೀಸ್ ಇಲಾಖೆ ಜನತೆಯ ನಂಬಿಕೆಯನ್ನು ಉಳಿಸುವ ಪ್ರಯತ್ನ ಮಾಡಿದೆ. ಕಾನೂನು, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜನತೆ ಕೂಡ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕುಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ್ತ ಎಂದು ಪ್ರದರ್ಶನ ಉದ್ಘಾಟಿಸಿದ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.

ಜನರು ಮತ್ತು ಪೊಲೀಸರ ನಡುವೆ ವಿಶ್ವಾಸವನ್ನು ಬೆಳೆಸುವ, ಜನಸ್ನೇಹಿ ಪೊಲೀಸ್ ವ್ಯವಸ್ಥೆಯು ಅತ್ಯಗತ್ಯವಾಗಿದ್ದು, ಸಾರ್ವಜನಿಕರು ಕೂಡಾ ತಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆ, ನಿಯಮ ಉಲ್ಲಂಘನೆ ಬಗ್ಗೆ ಜಾಗೃತರಾಗಿದ್ದಾಗ ಸಮಾಜದಲ್ಲಿ ಅಪರಾಧ ಕೃತ್ಯಗಳು ಕಡಿಮೆಯಾಗುತ್ತವೆ ಎಂದವರು ಹೇಳಿದರು.


2.90 ಕೋಟಿ ರೂ. ಮೌಲ್ಯದ ಸೊತ್ತು ವಶ

ಕಾರ್ಯಕ್ರಮದ ರುವಾರಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, 2020-21ನೇ ಸಾಲಿನಲ್ಲಿ ನಡೆದ ವಿವಿಧ ಪ್ರಕರಣಗಳಲ್ಲಿ 100ಕ್ಕೂ ಅಧಿಕ ದ್ವಿಚಕ್ರ, 20ಕ್ಕೂ ಅಧಿಕ ಚತುಷ್ಚಕ್ರ, 20 ಕೆಜಿ ಬೆಳ್ಳಿ, ಚಿನ್ನಾಭರಣಗಳು, 35 ಲಕ್ಷ ರೂ.ಗಳಿಗೂ ಅಧಿ ಹಣ ಸೇರಿದಂತೆ 2.90 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.ಕಳವು ಪ್ರಕರಣಗಳಲ್ಲಿ 212 ಕೇಸ್ ಪತ್ತೆ ಮಾಡಲಾಗಿದೆ. 2021ರಲ್ಲಿ ಇಲ್ಲಿವರೆಗೆ 277 ಕಳವು ಪ್ರಕರಣಗಳಲ್ಲಿ 137 ಕೇಸ್ ಪತ್ತೆ ಹಚ್ಚಲಾಗಿದೆ. ಮಂಗಳೂರು ಸುತ್ತಮುತ್ತ ಜಿಲ್ಲೆಗಳ 100ಕ್ಕೂ ಅಧಿಕ ಪ್ರಕರಣ ಇದರಲ್ಲಿ ಸೇರಿದೆ. ಕಳವು ಪ್ರಕರಣಗಳಲ್ಲಿ 20 ಚತುಷ್ಪಕ್ರ ವಾಹನ, 105 ದ್ವಿಚಕ್ರ ಹಾಗೂ 135 ಮೊಬೈಲ್ ಕಳ್ಳತನ ನಡೆದಿದೆ. ಅಲ್ಲದೆ 20 ಕೆಜಿ ಬೆಳ್ಳಿ, 3 ಕೆಜಿ ಚಿನ್ನ ಸೇರಿ ಕಳವಾದ ಸೊತ್ತಿನ ಮೌಲ್ಯ ಒಟ್ಟು 2.90 ಕೋಟಿ ರು. ಆಗಿದೆ. ಕಳ್ಳತನಕ್ಕೆ ಸಂಬಂಧಿಸಿ 726 ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ವೇದಿಕೆಯಲ್ಲಿ ಡಿಸಿಪಿ ದಿನೇಶ್ ಕುಮಾರ್ ಉಪಸ್ಥಿತರಿದ್ದರು. ಇನ್ಸ್‌ಪೆಕ್ಟರ್ ಜ್ಯೋತಿರ್ಲಿಂಗ ಕಾರ್ಯಕ್ರಮ ನಿರೂಪಿಸಿದರು. ಡಿಸಿಪಿ ಹರಿರಾಂ ಶಂಕರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News