“’ಅಪರಾಧಿ' ಎಂದು ಘೋಷಿತರಾದ ರಾಜಕಾರಣಿಗಳು ಚುನಾವಣೆ ಸ್ಪರ್ಧಿಸುವುದಕ್ಕೆ ನಿಷೇಧ ಹೇರುತ್ತೀರಾ?”

Update: 2021-11-25 11:49 GMT

ಹೊಸದಿಲ್ಲಿ: ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯಾಲಯಗಳಿಂದ ದೋಷಿಗಳೆಂದು ಘೋಷಿತರಾದ ರಾಜಕಾರಣಿಗಳು ಜೀವನಪರ್ಯಂತ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಿಷೇಧ ಹೇರಲು ಸಿದ್ಧರಿದ್ದೀರಾ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಕ್ರಿಮಿನಲ್ ಪ್ರಕರಣಗಳಲ್ಲಿ ದೋಷಿಗಳೆಂದು ಘೋಷಿತರಾದ ಸರ್ಕಾರಿ ಉದ್ಯೋಗಿಗಳಿಗೆ ಜೀವನಪರ್ಯಂತ ಸೇವೆ ಮುಂದುವರಿಸಲು ಸಾಧ್ಯವಿಲ್ಲದೇ ಇರುವಾಗ ಅಂತಹುದೇ ನಿಯಮವನ್ನು ಶಾಸಕರು ಹಾಗೂ ಸಂಸದರಿಗೂ ಜಾರಿಗೊಳಿಸಬೇಕೆಂದು ಕೋರಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬವರು  ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಮೇಲಿನಂತೆ ಪ್ರಶ್ನಿಸಿದೆ.

"ಅಪರಾಧಿ ಎಂದು ಘೋಷಿತವಾದ ವ್ಯಕ್ತಿ ನಂತರ ಕ್ಲರ್ಕ್ ಆಗಲು ಸಾಧ್ಯವಿಲ್ಲ ಆದರೆ ಸಚಿವನಾಗಬಹುದು,'' ಎಂದು ಉಪಾಧ್ಯಾಯ ನ್ಯಾಯಾಲಯದಲ್ಲಿ ಹೇಳಿದರು.

ಈ ಬಗ್ಗೆ ಸರಕಾರದ ನಿಲುವೇನು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರನ್ನು ಕೇಳಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, "ಅಪರಾಧಿಗಳೆಂದು ಘೋಷಿತರಾದ ರಾಜಕಾರಣಿಗಳು ಚುನಾವಣೆ ಸ್ಪರ್ಧಿಸುವುದಕ್ಕೆ ನಿಷೇಧ ಹೇರುತ್ತೀರಾ,'' ಎಂದು ಪ್ರಶ್ನಿಸಿದಾಗ ಈ ಕುರಿತು ಸರ್ಕಾರದಿಂದ ಸೂಚನೆ ಪಡೆಯಬೇಕು ನಾನು ಈಗ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಹೇಳಿದರು.

ಅಧಿಕಾರಿಗಳು 'ಸೇವಾ ನಿಯಮಗಳಿಗೆ' ಬಾಧ್ಯಸ್ಥರಾಗಿದ್ದರೆ ಅಂತಹ ನಿಯಮಗಳು ಶಾಸಕರು, ಸಂಸದರಿಗಿಲ್ಲ ಹಾಗೂ ಅವರು ಜನಪ್ರಾತಿನಿಧ್ಯ ಕಾಯಿದೆಯಡಿ ಬರುತ್ತಾರೆ ಹಾಗೂ ಎರಡು ವರ್ಷ ಹಾಗೂ ಅದಕ್ಕಿಂತ ಹೆಚ್ಚು ಶಿಕ್ಷೆಯಾಗಬಲ್ಲ ಅಪರಾಧ ಕೃತ್ಯ ಎಸಗಿದವರನ್ನು ಆರು ವರ್ಷ ಚುನಾವಣೆ ಸ್ಪರ್ಧಿಸುವುದರಿಂದ ಅನರ್ಹಗೊಳಿಸಲಾಗುತ್ತದೆ ಎಂದು ಸರ್ಕಾರ ತನ್ನ ಅಫಿಡವಿಟ್‍ನಲ್ಲಿ ತಿಳಿಸಿತ್ತಲ್ಲದೆ ಉಪಾಧ್ಯಾಯ ಅವರ ಅರ್ಜಿಗೆ ಆಕ್ಷೇಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News