ಪುಂಜಾಲಕಟ್ಟೆ ಠಾಣೆಯ ಎಸ್ಸೈ ಕಾಲು ಮುರಿಯುತ್ತೇವೆ ಎಂದ ಹಿಂಜಾವೇ ಮುಖಂಡ ರಾಧಾಕೃಷ್ಣ ಅಡ್ಯಂತಾಯ

Update: 2021-11-25 13:25 GMT

ಮಂಗಳೂರು : ಕಾರಿಂಜ ಕ್ಷೇತ್ರದಲ್ಲಿ ಹಾಕಲಾದ ಭಗವಧ್ವಜವನ್ನು ತೆಗೆಯಬೇಕು ಎಂದು ಪುಂಜಾಲಕಟ್ಟೆ ಠಾಣೆಯ ಎಸ್ಸೈ ಸೌಮ್ಯ ಸೂಚಿಸಿದ್ದಾರೆ. ನಾವು ಆ ಧ್ವಜವನ್ನು ತೆಗೆಯುವುದಿಲ್ಲ. ಇನ್ನೊಂದು ವಾರದೊಳಗೆ ಅಂತಹ ಸಾವಿರ ಧ್ವಜ ಹಾಕಿಸುತ್ತೇವೆ. ತಾಕತ್ತಿದ್ದರೆ ಅದನ್ನು ತೆಗೆಸಬೇಕು. ಏನಿದು, ಘೋರಿ ಮುಹಮ್ಮದನ ಕಾಲವಾ, ಟಿಪ್ಪು ಸುಲ್ತಾನ್ ಕಾಲವಾ ? ಹಿಂದೂ ಸಮಾಜ ಫುಟ್ಬಾಲ್ ಅಲ್ಲ. ಕಲ್ಲುಗುಂಡು ಇದ್ದ ಹಾಗೆ. ನಿಮ್ಮ ಕೆಲಸ ಮಾಡಿ. ಇಲ್ಲದಿದ್ದರೆ ನಿಮ್ಮ ಕಾಲು ಮುರಿಯುತ್ತೇವೆ ಎಂದು ಎಚ್ಚರಿಕೆ ನೀಡಿದ ಹಿಂಜಾವೇ ಪ್ರಾಂತೀಯ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ, ಪತ್ರಕರ್ತರ ತರಾಟೆಯ ಬಳಿಕ 'ನಾನು ಹಾಗೇ ಹೇಳಲೇ ಇಲ್ಲ' ಎಂದು ಸಮಜಾಯಿಷಿ ನೀಡಿದ ವಿದ್ಯಮಾನ ಗುರುವಾರ ನಡೆದಿದೆ.

ಕಾರಿಂಜ ಕ್ಷೇತ್ರದ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆಪಾದಿಸಿ ನ.21ರಂದು ಕಾರಿಂಜ ರಥಬೀದಿಯಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ ದ.ಕ. ಜಿಲ್ಲಾಧಿಕಾರಿಗೆ ಅಗೌರವ ತರುವ ರೀತಿಯಲ್ಲಿ ಭಾಷಣ ಮಾಡಿದ್ದರು. ಇದರ ವಿರುದ್ಧ ದ.ಕ.ಜಿಲ್ಲಾಧಿಕಾರಿ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಧಾಕೃಷ್ಣ ಅಡ್ಯಂತಾಯ ಪುಂಜಾಲಕಟ್ಟೆ ಠಾಣೆಯ ಎಸ್ಸೈ ಸೌಮ್ಯರ ವಿರುದ್ಧ ಹರಿಹಾಯ್ದು ಅವರ ಕಾಲು ಮುರಿಯುತ್ತೇವೆ ಎಂದು ಎಚ್ಚರಿಸಿದರು. ಇದನ್ನು ಪತ್ರಕರ್ತರು ಪ್ರಶ್ನಿಸಿ ತೀವ್ರ ತರಾಟೆಗೆ ತೆಗೆದುಕೊಂಡ ಬಳಿಕ ನಾನು ಹಾಗೇ ಹೇಳಲಿಲ್ಲ. ಹಿಂದೂ ಸಮಾಜ ಚೆಂಡಲ್ಲ. ಕಲ್ಲುಗುಂಡು ಇದ್ದಂತೆ. ತಾಗಿದರೆ ಕಾಲು ಮುರಿಯುತ್ತದೆ ಎಂದು ಸಮಜಾಯಿಷಿ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News