ಉಡುಪಿ: ಕಿತ್ತಳೆಹಣ್ಣಿನ ಹಾರ ಹಾಕಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಜಬ್ಬರಿಗೆ ಸನ್ಮಾನ

Update: 2021-11-25 12:42 GMT

ಉಡುಪಿ, ನ.25: ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಪದ್ಮಶ್ರೀ ಪ್ರಶಸ್ತಿ ವಿಜೇತ ಹರೇಕಳ ಹಾಜಬ್ಬ ಅವರನ್ನು ಗುರುವಾರ ಹೊಟೇಲ್ ಕಿದಿಯೂರಿನ ಪವನ್ ರೂಫ್‌ಟಾಪ್ ಸಭಾಂಗಣದಲ್ಲಿ ವಿಶಿಷ್ಟ ವಾಗಿ ಸನ್ಮಾನಿಸಲಾಯಿತು.

ಕಿತ್ತಳೆ ಹಣ್ಣು ಮಾರಿ ಊರಿನ ಮಕ್ಕಳಿಗಾಗಿ ಶಾಲೆಯೊಂದನ್ನು ಕಟ್ಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದ ಹಾಜಬ್ಬರಿಗೆ ಕಿತ್ತಳೆ ಹಣ್ಣಿನ ಹಾರ ಹಾಕಿ, ಬುಟ್ಟಿತುಂಬ ಕಿತ್ತಳೆ ಹಣ್ಣನ್ನು ನೀಡಿ ಸನ್ಮಾನಿಸಲಾಯಿತು.

ಅಂಬಲಪಾಡಿ ಕಲಾವಿದ ಕೆ.ಜೆ. ಕೃಷ್ಣ ರಚಿಸಿದ ತುಳುನಾಡ ಕಲಾ ಸಿರಿ ವಿಶೇಷ ಪೇಟ, ಕೇದಗೆಮುಂದಲೆ- ಅಣಿ ಮಾದರಿ ಕಿರೀಟವನ್ನು ಹಾಜಬ್ಬರಿಗೆ ತೊಡಿಸಲಾಯಿತು. ಇದಕ್ಕೆ ಮೊದಲು ಅವರನ್ನು ಬೃಹತ್‌ ಗಾತ್ರದ ರಾಷ್ಟ್ರಧ್ವಜದ ಜೊತೆಗೆ ಚಂಡೆವಾದ್ಯಗಳ ಸಮೇತ ವೇದಿಕೆಗೆ ಕರೆ ತರಲಾಗಿತ್ತು.

‘ದೇಶದ ಮೂಲೆಯಲ್ಲಿದ್ದ ನನ್ನನ್ನು ಗುರುತಿಸಿ ನನಗೆ ಪ್ರಶಸ್ತಿ ನೀಡಿದವರಿಗೆ ನಾನು ಋಣಿಯಾಗಿದ್ದೇನೆ. ಪ್ರಧಾನಿ ಹಾಗೂ ರಾಷ್ಟ್ರಪತಿಯನ್ನು ತುಂಬಾ ಹತ್ತಿರದಿಂದ ನೋಡುವ ಭಾಗ್ಯ ನನಗೆ ಸಿಕ್ಕಿರುವುದು ತುಂಬಾ ಸಂತಸ ತಂದಿದೆ. ಇದರ ಜತೆಗೆ ನನ್ನ ಶಾಲೆಗೆ ಹಲವಾರು ಮಂದಿ ದಾನಿಗಳು ವಿವಿಧ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಇವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ’ ಎಂದು ಸನ್ಮಾನಕ್ಕೆ ಉತ್ತರವಾಗಿ ಹರೇಕಳ ಹಾಜಬ್ಬ ತಿಳಿಸಿದರು.

ಇದೇ ವೇಳೆ ಪದ್ಮವಿಭೂಷಣ ಪ್ರಶಸ್ತಿ ಪಡೆದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪರವಾಗಿ ಪೇಜಾವರ ಮಠದ ದಿವಾಣ ರಘುರಾಮ ಆಚಾರ್ಯರನ್ನು ಗೌರವಿಸಲಾಯಿತು. ದಿ.ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಪೂರ್ವಾಶ್ರಮದ ಸಹೋದರ ರಘುರಾಮ ಆಚಾರ್ಯ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿಯ ಹಿರಿಯ ಕಾನೂನು ಅಧಿಕಾರಿ ಮುಮ್ತಾಝ್ ಮಾತನಾಡಿ, ಕಿತ್ತಳೆ ಹಣ್ಣು ಮಾರಾಟ ಮಾಡಿ ಪದ್ಮಶ್ರೀ ಪ್ರಶಸ್ತಿ ಪಡೆದಿರುವುದಕ್ಕೆ ಹರೇಕಳ ಹಾಜಬ್ಬ ಅವರು ವಿಶ್ವಕ್ಕೆ ಮಾದರಿಯಾಗಿದ್ದಾರೆ. ಪ್ರಶಸ್ತಿಗಳು ಕೇವಲ ಸಮ್ಮಾನಕ್ಕೆ ಸೀಮಿತವಾಗದೆ ಸಮಾಜಸೇವಕರೊಂದಿಗೆ ಕೈಜೋಡಿಸುವ ಕೆಲಸವಾಗಬೇಕು. ಈ ಮೂಲಕ ಸಾಧನೆಗಳು ಮತ್ತಷ್ಟು ವಿಸ್ತಾರವಾಗಿ ಉಪಯುಕ್ತವಾಗಬೇಕು ಎಂದರು.

ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ ಶೆಟ್ಟಿ ಎಸ್.ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಉಡುಪಿ ಶಾಖಾ ಮುಖ್ಯಸ್ಥ ಹಫೀಝ್ ರಹ್ಮಾನ್ ಅಡ್ಯಾರು, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ಪಿಎಸ್‌ಐ ವಾಸಪ್ಪ ನಾಯ್ಕಾ, ಉದ್ಯಮಿ ಭುವನೇಂದ್ರ ಕಿದಿಯೂರು ಉಪಸ್ಥಿತರಿದ್ದರು.

ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಸ್ವಾಗತಿಸಿ, ಪ್ರಸ್ತಾವನೆಗೈದರು. ರಾಮ ಮಾಸ್ಟರ್ ಕುತ್ಪಾಡಿ ಸಮ್ಮಾನ ಪತ್ರ ವಾಚಿಸಿದರು. ಕೆ.ಬಾಲಗಂಗಾಧರ್ ರಾವ್ ವಂದಿಸಿದರು. ನ್ಯಾಯವಾದಿ ರಾಜಶೇಖರ್ ಪಿ.ಶ್ಯಾಮರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News