ರೈತರ ಬೆಳೆ ಹಾನಿಗೆ ಪರಿಹಾರ ನೀಡುವಂತೆ ಜೆಡಿಎಸ್ ಒತ್ತಾಯ

Update: 2021-11-25 12:48 GMT

ಉಡುಪಿ, ನ.25: ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಈಗಾಗಲೇ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗೆ ಹಾಗಿದೆ. ಸಾಲ ಮಾಡಿ ಬೆಳೆದ ಬೆಳೆ ಹಾಳಾಗಿ ಈಗಾಗಲೇ ರೈತರು ಕಂಗಾಲಾಗಿದ್ದಾರೆ. ಆದುದರಿಂದ ಸರಕಾರ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ ತಕ್ಷಣವೇ ರೈತರಿಗೆ ಪರಿಹಾರವನ್ನು ಒದಗಿಸಬೇಕು ಎಂದು ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೇಶ್ ಶೆಟ್ಟಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಅಕಾಲಿಕ ಮಳೆಯಿಂದ ಜಿಲ್ಲೆಯ ಪ್ರಮುಖ ಬೆಳೆಯಾದ ಭತ್ತ ಮತ್ತು ಅಡಿಕೆ ಬೆಳೆಗಾರರು ತುಂಬಾ ನಷ್ಟವನ್ನು ಅನುಭವಿಸಿದ್ದಾರೆ. ಅಲ್ಲದೆ ಉಡುಪಿಯ ವಿಶೇಷ ಬೆಳೆಗಳಲ್ಲಿ ಒಂದಾದ ಮಟ್ಟು ಗುಳ್ಳ ಬೆಳೆದವರಿಗೂ ಈ ಅಕಾಲಿಕ ಮಳೆಯಿಂದ ತುಂಬಾ ನಷ್ಟವುಂಟಾ ಗಿದೆ. ಮಲ್ಲಿಗೆ ಕೃಷಿಗೂ ಅತಿಯಾದ ಮಳೆಯಿಂದ ಮೊಗ್ಗು ಅರಳದೇ ಇಳುವರಿ ಕುಂಠಿತಗೊಂಡಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದ್ದರಿಂದ ಉಡುಪಿಯ ಸಂಸದರೂ ಆಗಿರುವ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವರಾಗಿರುವ ಶೋಭಾ ಕರಂದ್ಲಾಜೆ ಅವರು ಉಡುಪಿ ಜಿಲ್ಲೆಯ ರೈತರಿಗೆ ಕೂಡಲೇ ವಿಶೇಷ ಪ್ಯಾಕೇಜ್ ಪರಿಹಾರವನ್ನು ಘೋಷಿಸಬೇಕು. ಅದೇ ರೀತಿ ರೈತರು ಮಾಡಿದ ಬೆಳೆಸಾಲವನ್ನು ಮನ್ನಾ ಮಾಡಬೇಕೆಂದು ಯೋಗೇಶ್ ಶೆಟ್ಟಿ ಸರಕಾರವನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News