×
Ad

ಭವಿಷ್ಯದಲ್ಲಿ ಬೆರಳೆಣಿಕೆಯಷ್ಟು ಕ್ರಿಪ್ಟೊಕರೆನ್ಸಿಗಳು ಮಾತ್ರ ಉಳಿದುಕೊಳ್ಳಲಿವೆ: ರಘುರಾಮ್ ರಾಜನ್

Update: 2021-11-25 18:25 IST

ಹೊಸದಿಲ್ಲಿ: ಇಂದು ಅಸ್ತಿತ್ವದಲ್ಲಿರುವ 6,000ಕ್ಕೂ ಅಧಿಕ ಕ್ರಿಪ್ಟೊಕರೆನ್ಸಿಗಳ ಪೈಕಿ ಬೆರಳೆಣಿಕೆಯಷ್ಟು ಮಾತ್ರ ಭವಿಷ್ಯದಲ್ಲಿ ಉಳಿದುಕೊಳ್ಳಬಹುದು ಎಂದು ಮಾಜಿ ಆರ್ಬಿಐ ಗವರ್ನರ್ ರಘುರಾಮ ರಾಜನ್ ಅವರು ಹೇಳಿದ್ದಾರೆ. ಕ್ರಿಪ್ಟೊಕರೆನ್ಸಿಗಳ ಹುಚ್ಚನ್ನು 17ನೇ ಶತಮಾನದಲ್ಲಿ ನೆದರ್‌ಲ್ಯಾಂಡ್ಸ್‌ ನಲ್ಲಿಯ ಟುಲಿಪ್ ಉನ್ಮಾದಕ್ಕೆ ಹೋಲಿಸಿರುವ ಅವರು, ಮೌಲ್ಯದ ಸಂಗ್ರಹ ಮತ್ತು ಮೌಲ್ಯವರ್ಧನೆ ಆಗಬಹುದಾದ ಒಂದು ಆಸ್ತಿಯಾಗಿ ಹಾಗೂ ಪಾವತಿಗಳಲ್ಲಿ ಬಳಕೆಗಾಗಿ; ಈ ಎರಡು ಕಾರಣಗಳಿಂದಾಗಿ ಜನರು ಕ್ರಿಪ್ಟೊಕರೆನ್ಸಿಗಳನ್ನು ಹೊಂದಿದ್ದಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾವತಿಗಳನ್ನು ಮಾಡಲು ನಮಗೆ ನಿಜಕ್ಕೂ 6,000 ಕ್ರಿಪ್ಟೊಕರೆನ್ಸಿಗಳ ಅಗತ್ಯವಿದೆಯೇ? ನಗದು ಮತ್ತು ಕರೆನ್ಸಿಗೆ ಬದಲಿಯಾಗಿ ತಂತ್ರಜ್ಞಾನವು ಅಷ್ಟೊಂದು ಉಪಯೋಗಿಯಾಗಿದ್ದರೂ ಪಾವತಿಗಳಲ್ಲಿ ಬಳಕೆಗಾಗಿ ಒಂದೆರಡು, ಕೈಬೆರಳೆಣಿಕೆಯಷ್ಟು ಕ್ರಿಪ್ಟೊಕರೆನ್ಸಿಗಳು ಉಳಿದುಕೊಳ್ಳಬಹುದು. ಮುಂದೆ ಅಧಿಕ ಮೌಲ್ಯಗಳೊಂದಿಗೆ ಹೆಚ್ಚಿನ ಕ್ರಿಪ್ಟೊಗಳು ಬದುಕುಳಿಯುವ ಸಾಧ್ಯತೆಯಿಲ್ಲ ಎಂದು ಆಂಗ್ಲ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಾಜನ್ ಹೇಳಿದರು.

ಜನರಿಂದ ಹಣ ಸಂಗ್ರಹಿಸಿ ಪಂಗನಾಮ ಹಾಕುವ ಅನಿಯಂತ್ರಿತ ಚಿಟ್ ಫಂಡ್ ಗಳ ಸಮಸ್ಯೆಯನ್ನೇ ಕ್ರಿಪ್ಟೊಗಳು ಕೂಡ ಒಡ್ಡಬಹುದು ಎಂದು ಹೇಳಿದ ರಾಜನ್, “ಭವಿಷ್ಯದಲ್ಲಿ ಹೆಚ್ಚು ಮೌಲ್ಯವನ್ನು ಹೊಂದಲಿವೆ ಎಂಬ ಕಾರಣದಿಂದ ಮಾತ್ರ ವಸ್ತುಗಳು ಹೆಚ್ಚಿನ ಮೌಲ್ಯವನ್ನು ಹೊಂದಿದ್ದರೆ ಮತ್ತು ಅದೊಂದೇ ಕಾರಣವಾಗಿದ್ದರೆ ಅದನ್ನು ನಾವು ಗುಳ್ಳೆ ಎಂದು ಕರೆಯುತ್ತೇವೆ” ಎಂದು ಬೆಟ್ಟು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News