ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿಗೆ ಸನ್ಮಾನ
ಮಂಗಳೂರು, ನ.25: ಚಂದ್ರಶೇಖರ ಪಾಲೆತ್ತಾಡಿ ನಿಷ್ಠುರವಾದಿ, ನೇರ ನಡೆ ನುಡಿಯ ದಿಟ್ಟ ಪತ್ರಕರ್ತ. ಕಳೆದ ಮೂವತ್ತು ವರ್ಷಗಳಿಂದ ಪಾಲೆತ್ತಾಡಿಯವರನ್ನು ಬಹಳ ಹತ್ತಿರದಿಂದ ಬಲ್ಲವನಾಗಿದ್ದಾನೆ. ಮುಂಬೈ ಮಹಾನಗರದಲ್ಲಿ ಜನ ಸಾಮಾನ್ಯ ರೊಂದಿಗೆ ಬೆರೆಯುವ ಪತ್ರಕರ್ತರಾಗಿ ಪಾಲೆತ್ತಾಡಿ ’ಮಲ್ಲ’ ಪತ್ರಿಕೆ ಮುಖೇನ ತುಳು-ಕನ್ನಡಿಗರ ಸಂಘ ಸಂಸ್ಥೆಗಳ ಹಾಗೂ ನಾಡಿನ ಭಾಷೆ, ಕಲೆ-ಸಂಸ್ಕೃತಿಯ ಉನ್ನತಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಪಾಲೆತ್ತಾಡಿ ಅವರನ್ನು ಬಂಟರ ಸಂಘಗಳ ಒಕ್ಕೂಟದ ವತಿಯಿಂದ ನಗರದ ಬಂಟ್ಸ್ ಹಾಸ್ಟೇಲ್ನಲ್ಲಿರುವ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.
ಪತ್ರಕರ್ತ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಾಧ್ಯಮ ಕಾರ್ಯನಿರ್ವಾಹಕ ಜಗನ್ನಾಥ ಶೆಟ್ಟಿ ಬಾಳ ಅಭಿನಂದನಾ ನುಡಿಗಳನ್ನಾಡಿದರು. ಸನ್ಮಾನಕ್ಕೆ ಉತ್ತರವಾಗಿ ಮಾತನಾಡಿದ ಚಂದ್ರಶೇಖರ ಪಾಲೆತ್ತಾಡಿಯವರು ದೇಶ- ವಿದೇಶಗಳ ಸುದ್ದಿಗಳನ್ನು ಹೆಚ್ಚಿನ ಪತ್ರಿಕೆಗಳು ನೀಡುತ್ತದೆ. ಆದರೆ ಕರ್ನಾಟಕ ಮಲ್ಲ ನಮ್ಮವರ, ನಮ್ಮೂರ ಜನರ, ತುಳು-ಕನ್ನಡಿಗರ ಸಂಘ-ಸಂಸ್ಥೆಗಳ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು ಎಂಬ ಚಿಂತನೆಯೊಂದಿಗೆ ಪತ್ರಿಕೆಯನ್ನು ಬೆಳೆಸಿ ಕೊಂಡು ಬಂದಿದ್ದೇವೆ. ಹಾಗಾಗಿ ಕರ್ನಾಟಕ ಮಲ್ಲ ಇಂದು ಮುಂಬಯಿ ಕನ್ನಡಿಗರ ಮನೆ- ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ ಎಂದರು.
ಈ ಸಂದರ್ಭ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ್ ಪೂಂಜಾ, ಸಾಲೆತ್ತೂರು ಬಂಟರ ಸಂಘದ ಅಧ್ಯಕ್ಷರಾದ ದೇವಪ್ಪ ಶೇಖ, ಅಮರೇಶ್ ಶೆಟ್ಟಿ ಸಾಲೆತ್ತೂರು, ಒಕ್ಕೂಟದ ವಿಶೇಷ ಆಹ್ವಾನಿತರಾದ ಹೇಮಂತ್ ಶೆಟ್ಟಿ, ಒಕ್ಕೂಟದ ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ,, ರವಿ ಶೆಟ್ಟಿ, ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಉಪಸ್ಥಿತರಿದ್ದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜೊತೆ ಕಾರ್ಯದರ್ಶಿ ಸತೀಶ್ ಅಡಪ ಸಂಕ ಬೈಲು ಕಾರ್ಯಕ್ರಮ ನಿರೂಪಿಸಿದರು.