×
Ad

ಸಿಪಿಐ ಮುಖಂಡ ಚಂದಪ್ಪ ಅಂಚನ್ ನಿಧನ

Update: 2021-11-25 19:39 IST

ಮಂಗಳೂರು, ನ.25: ಸಿಪಿಐ ಹಾಗೂ ಎಐಟಿಯುಸಿ ಹಿರಿಯ ಮುಖಂಡ, ನಾಟಕ ಕಲಾವಿದ ಸುಜೀರು ಚಂದಪ್ಪ ಅಂಚನ್ (72) ಅಲ್ಪಕಾಲದ ಅಸೌಖ್ಯದ ಬಳೀಕ ಬುಧವಾರ ರಾತ್ರಿ ಅವರ ಸ್ವಗೃಹ ಬಂಟ್ವಾಳದ ಸುಜೀರ್‌ನಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮುಂಬೈಯಲ್ಲಿ ಹೊಟೇಲ್ ವೃತ್ತಿಯಲ್ಲಿದ್ದ ಎಸ್. ಚಂದಪ್ಪ ಅಂಚನ್ ಅವರು ಬಿ.ವಿ. ಕಕ್ಕಿಲಾಯ ಹಾಗೂ ಬಿ.ವಿಶ್ವನಾಥ ನಾಯ್ಕಿರ ಪ್ರೇರಣೆಯಿಂದ ಕೆಲಸವನ್ನು ತ್ಯಜಿಸಿ ಪಕ್ಷದ ಪೂರ್ಣಾವಧಿ ಕಾರ್ಯಕರ್ತರಾಗಿ ದುಡಿದರು. ಸಿಪಿಐ ಅವಿಭಜಿತ ದ.ಕ. ಜಿಲ್ಲಾ ಕಾರ್ಯಕಾರಿ ಸಮಿತಿಯಲ್ಲಿದ್ದುಕೊಂಡು ಜವಾಬ್ದಾರಿ ನಿರ್ವಹಿಸಿದ್ದರು.

ಎಐಟಿಯುಸಿ ರಾಷ್ಟ್ರೀಯ ಸಮಿತಿ ಸದಸ್ಯರು ಹಾಗೂ ಜಿಲ್ಲಾ ಕಾರ್ಯದರ್ಶಿಯಾಗಿದ್ದರು. ಅಖಿಲ ಭಾರತ ಬೀಡಿ, ಸಿಗಾರ್ ಆ್ಯಂಡ್ ತಂಬಾಕು ಕಾರ್ಮಿಕರ ಫೆಡರೇಶನ್‌ನ ಕಾರ್ಯದರ್ಶಿಯಾಗಿ ದುಡಿದಿದ್ದರು. ಅಖಿಲ ಭಾರತ ಯುವಜನ ಫೆಡರೇಶನ್‌ನ ನಾಯಕರಾಗಿ ಯುವ ಸಮೂಹವನ್ನು ಮುನ್ನಡೆಸಿದ್ದರು.

ಅನೇಕ ತುಳು ನಾಟಕಗಳಲ್ಲಿ ನಟಿಸಿದ್ದ ಅವರು ನಿರ್ದೇಶಕರಾಗಿಯೂ ಯಶಸ್ವಿಯಾಗಿದ್ದರು. ತನ್ನ ಮಜಿಲಗುತ್ತು ಅಂಚನ್ ಕುಟುಂಬಸ್ಥರನ್ನು ಸಂಘಟಿಸಿ ಕುಟುಂಬದ ದೈವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿದ್ದರು. ಮಜಿಲಗುತ್ತು ಕುಟುಂಬಸ್ಥರ ಪ್ರತಿನಿಧಿಯಾಗಿ ಕನಪಡಿತ್ತಾಯ ದೈವದ ಗಡಿಪ್ರಧಾನರಾಗಿ ಮುಂದಾಳುತ್ವ ವಹಿಸಿದ್ದರು.

ಮಜಿಲಗುತ್ತುನಲ್ಲಿ ಗುರುವಾರ ನಡೆದ ಅಂತ್ಯಸಂಸ್ಕಾರದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ವಿ.ಸೀತಾರಾಂ ಬೇರಿಂಜ, ಮಾಜಿ ಸಚಿವ ರಮಾನಾಥ ರೈ, ಮಜಿಲಗುತ್ತು ಮುಖ್ಯಸ್ಥರಾದ ರುಕ್ಮಯ ಪೂಜಾರಿ, ರಾಮದಾಸ ಕೋಟ್ಯಾನ್, ಸಂಜೀವ ಪೂಜಾರಿ, ಏಕನಾಥ ಪೂಜಾರಿ, ವಿಶ್ವನಾಥ ಕುಮಾರ್, ಜಿಪಂ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ರವೀಂದ್ರ ಕಂಬಳಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಐಟಿಯು ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಬಾಲಕೃಷ್ಣ ಶೆಟ್ಟಿ, ಸಿಪಿಐ ಜಿಲ್ಲಾ ಜೊತೆ ಕಾರ್ಯದರ್ಶಿ ಬಿ. ಶೇಖರ್, ಎಐಟಿಯುಸಿ ಜಿಲ್ಲಾ ಜೊತೆ ಕಾರ್ಯದರ್ಶಿಗಳಾದ ಸುರೇಶ್ ಕುಮಾರ್ ಬಂಟ್ವಾಳ್ ಮತ್ತು ಎಂ. ಕರುಣಾಕರ್, ಸಿಪಿಐ ಮುಂದಾಳು ಬಾಬು ಭಂಡಾರಿ, ತಿಮ್ಮಪ್ಪ ಕಾವೂರು, ಎಐವೈಎಫ್ ನಾಯಕರಾದ ಸುಧಾಕರ್ ಕಲ್ಲೂರು, ಕೃಷ್ಣಪ್ಪವಾಮಂಜೂರು, ಶ್ರೀನಿವಾಸ ಭಂಡಾರಿ, ಎನ್‌ಎಫ್‌ಐಡಬ್ಲ್ಯುನ ಭಾರತಿ ಪ್ರಶಾಂತ್ ಶಂಬೂರು, ವಸಂತಿ ಶೆಟ್ಟಿ, ಸರಸ್ವತಿ ಕಡೇಶಿವಾಲಯ ಹಾಜರಿದ್ದರು.

ನ.30ರಂದು ಬೆಳಗ್ಗೆ 10ಗಂಟೆಗೆ ನಗರದ ಕೊಡಿಯಾಲ್‌ ಬೈಲ್‌ನಲ್ಲಿರುವ ಕಾರ್ಪೋರೇಶನ್ ಬ್ಯಾಂಕ್ ನೌಕರರ ಸಂಘದ ಸಭಾಂಗಣದಲ್ಲಿ ಸಂತಾಪ ಸೂಚಕ ಸಭೆ ನಡೆಯಲಿದೆ ಎಂದು ಎಐಟಿಯುಸಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News