ಬಿಜೆಪಿ ದಲಿತಪರ ಎಂಬುದು ತೋರಿಕೆಯದ್ದು: ಧ್ರುವ ನಾರಾಯಣ್

Update: 2021-11-25 16:12 GMT

ಉಡುಪಿ, ನ. 25: ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕೆ ಸದಾ ಒತ್ತನ್ನು ನೀಡುವ ಪಕ್ಷವಾಗಿದ್ದು, ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲೂ ಅದನ್ನು ಸಾಬೀತು ಪಡಿಸಿದೆ. ಆದರೆ ಬಿಜೆಪಿಯ ಸಾಮಾಜಿಕ ನ್ಯಾಯ ತೋರಿಕೆ ಯದಾಗಿದ್ದು, ಅದು ದಲಿತರು ಹಾಗೂ ಅಲ್ಪಸಂಖ್ಯಾತರಿಗೆ ಯಾವುದೇ ಟಿಕೇಟ್ ನೀಡಿಲ್ಲ ಎಂದು ರಾಜ್ಯ ಕೆಪಿಸಿಸಿಯ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹೇಳಿದ್ದಾರೆ.

ಗುರುವಾರ ಉಡುಪಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ಕಾಂಗ್ರೆಸ್ ಪಕ್ಷ ವಿಧಾನಪರಿಷತ್‌ಗೆ ಚುನಾವಣೆ ನಡೆಯುವ 25 ಸ್ಥಾನಗಳಲ್ಲಿ 20ರಲ್ಲಿ ಸ್ಪರ್ಧೆ ಮಾಡುತಿದ್ದು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮುಂದುವರಿದವರು, ಯುವಕರು ಹಾಗೂ ಮಹಿಳೆಯರಿಗೆ ಟಿಕೇಟ್ ನೀಡಿ ತನ್ನ ಸಾಮಾಜಿಕ ನ್ಯಾಯದ ನಿಲುವನ್ನು ಎತ್ತಿ ಹಿಡಿದಿದೆ ಎಂದರು.

ಕಳೆದ ಬಾರಿ 25ರಲ್ಲಿ ಕಾಂಗ್ರೆಸ್ 13ರಲ್ಲಿ ಗೆದ್ದು, ಒಂದು ಸೀಟನ್ನು ಉಪ ಚುನಾವಣೆಯಲ್ಲಿ ಜಯಿಸಿದೆ. ಈ ಮೂಲಕ ಒಟ್ಟು 14 ಸೀಟುಗಳಲ್ಲಿ ಜಯ ಗಳಿಸಿದೆ. ಈ ಬಾರಿ ಕೂಡಾ ನಾವು ಇಷ್ಟೇ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದರು. ಕರಾವಳಿಯಲ್ಲೂ ನಾವು ಒಂದು ಸೀಟು ಗೆಲ್ಲಲು ಯಾವುದೇ ಸಮಸ್ಯೆ ಇಲ್ಲ. ಮಂಜುನಾಥ ಭಂಡಾರಿ ಅವರು ಜಯಗಳಿಸಲಿದ್ದಾರೆ ಎಂದರು.

ಮಂಜುನಾಥ ಭಂಡಾರಿ ಅವರು ಆರೆಸ್ಸೆಸ್‌ಗೆ ಮಣೆ ಹಾಕಿದ್ದಾರೆ ಎಂಬ ಆರೋಪಗಳ ಕುರಿತು ಪ್ರಶ್ನಿಸಿದಾಗ, ಇದು ಬಿಜೆಪಿ ನಡೆ ಸುವ ಅಪಪ್ರಚಾರ ಎಂದರು. ಮಂಜುನಾಥ ಭಂಡಾರಿ ಅವರು ವಿದ್ಯಾರ್ಥಿ ದಿಸೆಯಿಂದಲೇ ಕಾಂಗ್ರೆಸ್ ಜೊತೆಗಿದ್ದು, ನಾನೂ, ಅವರೂ ಎನ್‌ಎಸ್‌ಯುಐನ ಅಧ್ಯಕ್ಷರಾಗಿದ್ದೆವು ಎಂದರು.

ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್‌ನಿಂದ ದೂರ ಇರುವ ಬಗ್ಗೆ ಹಾಗೂ ಬಿಜೆಪಿ ಸೇರುವ ಬಗ್ಗೆ ದಟ್ಟವಾದ ವದಂತಿ ಇರುವ ಬಗ್ಗೆ ಪ್ರಶ್ನಿಸಿದಾಗ, ಇತ್ತೀಚಿನ ಹಾನಗಲ್ ಉಪಚುನಾವಣೆ ಸಂದರ್ಭದಲ್ಲಿ ಅವರು 15 ದಿನಗಳ ಕಾಲ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿದ್ದಾರೆ. ಹೀಗಾಗಿ ಇಂಥ ವದಂತಿಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಪ್ರಮೋದ್‌ ರನ್ನು ಸಮರ್ಥಿಸಿ ಕೊಂಡರು. ಆ ಬಳಿಕದ ಬೆಳವಣಿಗೆ ಬಗ್ಗೆ ನನಗೆ ಗೊತ್ತಿಲ್ಲ. ಅವರ ಬಳಿಯೇ ಕೇಳಿ ತಿಳಿದುಕೊಳ್ಳುತ್ತೇನೆ ಎಂದರು.

ಈ ಬಾರಿಯ ಟಿಕೇಟ್ ಹಂಚಿಕೆಯಿಂದ ವಿವಾದ ಎದ್ದಿರುವ ಬಗ್ಗೆ ಪ್ರಶ್ನಿಸಿದಾಗ, ಕಾಂಗ್ರೆಸ್ ದೊಡ್ಡ ಪಕ್ಷ. ಟಿಕೇಟ್‌ಗೆ ತುಂಬಾ ಮಂದಿ ಆಕಾಂಕ್ಷಿಗಳಿರುತ್ತಾರೆ. ಟಿಕೇಟ್ ಸಿಗದಾಗ ಒಂದೆರಡು ದಿನ ಅಸಮಧಾನವಿರುತ್ತೆ. ನಂತರ ಅವರು ಪಕ್ಷ ಆಯ್ಕೆ ಮಾಡಿದ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗಿಯಾಗುತ್ತಾರೆ. ಪಕ್ಷದ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಾಗಿದ್ದು, ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಲಿದ್ದಾರೆ ಎಂದರು.

ದೇಶದ ಪ್ರಗತಿಗೆ ಆರೆಸ್ಸೆಸ್ ಕೊಡುಗೆ ಏನು?

ಆರೆಸ್ಸೆಸ್ ಕುರಿತು ಪ್ರಶ್ನೆಯೊಂದಕ್ಕೆ ಗರಂ ಆಗಿ ಉತ್ತರಿಸಿದ ಧ್ರುವನಾರಾಯಣ್, ಈ ದೇಶದ ಪ್ರಗತಿಗೆ ಆರೆಸ್ಸೆಸ್‌ನ ಕೊಡುಗೆ ಏನಿದೆ ಎಂದು ಖಾರವಾಗಿ ಪ್ರಶ್ನಿಸಿದರು. ಸ್ವಾತಂತ್ರ ಪೂರ್ವದಲ್ಲಾಗಲೀ, ಸ್ವಾತಂತ್ರಾ ನಂತರದಲ್ಲಾಗಲೀ ದೇಶದ ಬೆಳವಣಿಗೆ, ಆರ್ಥಿಕ ಬೆಳವಣಿಗೆ ಹಾಗೂ ಭದ್ರತೆಗೆ ಅದು ಏನು ಕೊಡುಗೆ ಕೊಟ್ಟಿದೆ ?. ಅದಕ್ಕೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ನಂಬಿಕೆಯೇ ಇಲ್ಲ. ಅದಕ್ಕೇನಿದ್ದರೂ ಮನುವಾದದ ಶ್ರೇಣೀಕೃತ ಸಮಾಜವೇ ಗುರಿಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News