​ಕೃಷಿಕಾಯ್ದೆಗಳ ವಾಪಸಾತಿ: ಮನೆಗೆ ಮರಳುವ ಬದಲು ದಿಲ್ಲಿಯತ್ತ ಇನ್ನಷ್ಟು ರೈತರ ದೌಡು

Update: 2021-11-25 16:24 GMT
ಸಾಂದರ್ಭಿಕ ಚಿತ್ರ:PTI

ಚಂಡಿಗಡ,ನ.25: ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಗೆ ಒಂದು ವರ್ಷ ತುಂಬುತ್ತಿದ್ದು,ಅವರ ಮುಖ್ಯ ಅಜೆಂಡಾ ಸಾಧನೆಯಾಗಿದ್ದರೂ ದಿಲ್ಲಿಯ ಗಡಿಗಳಲ್ಲಿಯ ಪ್ರತಿಭಟನಾ ತಾಣಗಳು ತೆರವಾಗುವ ಲಕ್ಷಣಗಳು ಕಂಡುಬರುತ್ತಿಲ್ಲ.

ಪಂಜಾಬ್ ಮತ್ತು ಹರ್ಯಾಣಗಳಿಂದ ಇನ್ನಷ್ಟು ರೈತರು ರಸ್ತೆ ಮತ್ತು ರೈಲು ಮಾರ್ಗದ ಮೂಲಕ ದಿಲ್ಲಿ ಸಮೀಪದ ಸಿಂಘು ಮತ್ತು ಟಿಕ್ರಿ ಗಡಿಗಳಿಗೆ ಧಾವಿಸುತ್ತಿದ್ದಾರೆ. ಸಂಯುಕ್ತ ಕಿಸಾನ ಮೋರ್ಚಾ (ಎಸ್‌ಕೆಎಂ) ಪ್ರತಿಭಟನೆಯ ಒಂದು ವರ್ಷದ ಅಂಗವಾಗಿ ದಿಲ್ಲಿ ಗಡಿಯ ಸಮೀಪ ಶುಕ್ರವಾರ ಮಹಾಪಂಚಾಯತ್ ಅನ್ನು ಆಯೋಜಿಸಿದೆ.

ಕಳೆದ ವಾರ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿಯವರ ಅಚ್ಚರಿಯ ಪ್ರಕಟಣೆಯ ಬಳಿಕ ರೈತರು ಕಾಯ್ದೆಗಳು ವಿಧ್ಯುಕ್ತವಾಗಿ ರದ್ದುಗೊಳ್ಳುವವರೆಗೆ ಮತ್ತು ಇತರ ಬೇಡಿಕೆಗಳು ಈಡೇರುವವರೆಗೆ ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸುವುದಿಲ್ಲ ಎಂದು ಹೇಳಿದ್ದರು.

ಎಸ್‌ಕೆಎಂ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲು ಆರು ಷರತ್ತುಗಳನ್ನು ಮುಂದಿಟ್ಟು ರವಿವಾರ ಮೋದಿಯವರಿಗೆ ಪತ್ರವನ್ನು ಬರೆದಿತ್ತು.

ಚಳಿಗಾಲದ ಅಧಿವೇಶನ ಆರಂಭಗೊಳ್ಳುವ ನ.29ರಂದು ಸಂಸತ್ತಿಗೆ ಜಾಥಾ ಸೇರಿದಂತೆ ಮುಂದಿನ ಸರಣಿ ಕಾರ್ಯಕ್ರಮಗಳನ್ನು ಎಸ್‌ಕೆಎಂ ರವಿವಾರದ ತನ್ನ ಸಭೆಯಲ್ಲಿ ನಿರ್ಧರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News