ಶಿವಪುರ ಹೊಳೆಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಮೃತ್ಯು

Update: 2021-11-26 15:55 GMT

ಹೆಬ್ರಿ, ನ.26: ಹೊಳೆಗೆ ಸ್ನಾನಕ್ಕೆ ಇಳಿದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ನ.26ರಂದು ಬೆಳಗ್ಗೆ 11ಗಂಟೆ ಸುಮಾರಿಗೆ ಶಿವಪುರ ಗ್ರಾಮದ ಬಟ್ರಾಡಿ ಎಂಬಲ್ಲಿ ನಡೆದಿದೆ.

ಮೃತರನ್ನು ಪಾಡಿಗಾರ್ ನಿವಾಸಿಗಳಾದ ರಮೇಶ್ ಪೂಜಾರಿ ಎಂಬವರ ಮಗ ಕಿರಣ್(18), ದಯಾನಂದ ಪೂಜಾರಿ ಎಂಬವರ ಮಗ ಸುದರ್ಶನ್(18) ಹಾಗೂ ಹಿರಿಯಡ್ಕ ಬಜೆ ನಿವಾಸಿ ದಿ.ಪ್ರಕಾಶ್ ಎಂಬವರ ಮಗ ಸೋನಿತ್(18) ಎಂದು ಗುರುತಿಸಲಾಗಿದೆ. ಇವರು ಮೂವರು ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು.

ತರಗತಿಗೆ ಗೈರು ಹಾಜರಿ

ಇವರು ತಮ್ಮ ಸಹಪಾಠಿಗಳಾದ ವರದರಾಜ್, ರಿತೇಶ್ ಮೂಲ್ಯ, ರಿತೇಶ್, ಪವನ್, ದೀಕ್ಷಿತ್, ದರ್ಶನ್, ಸುಜನ್, ವಿವೇಕ್, ಸುಹಾನ್ ಎಂಬವರೊಂದಿಗೆ ಇಂದು ಬೆಳಗ್ಗೆ 10 ಗಂಟೆಗೆ ಕಾಲೇಜಿಗೆ ಗೈರು ಹಾಜರು ಹಾಕಿ ಹಿರಿಯಡ್ಕ ದಿಂದ ಬಸ್ಸಿನಲ್ಲಿ ಶಿವಪುರ ಕೊರಗಜ್ಜ ದೇವಸ್ಥಾನಕ್ಕೆ ಹೊರಟಿದ್ದರು. ದೇವಸ್ಥಾನ ದಿಂದ ಬಳಿಕ ಇವರು ಅಲ್ಲೇ ಸಮೀಪದ ಬಟ್ರಾಡಿ ಹೊಳೆಯಲ್ಲಿ ಸ್ನಾನ ಮಾಡಲು ನಿರ್ಧರಿಸಿದ್ದರು.

ಆದರೆ ಇವರಲ್ಲಿ ಆರು ಮಂದಿ ಸ್ನಾನಕ್ಕೆ ತೆರಳದೆ ಬೇರೆ ಕಡೆ ಹೋದರು. ಉಳಿದ ಆರು ಮಂದಿ ಹೊಳೆಯ ಬದಿಗೆ ಹೋಗಿದ್ದು, ಅದರಲ್ಲಿ ಕಿರಣ್, ಸುದರ್ಶನ್ ಮತ್ತು ಸೋನೀಶ್ ಬೆಳಗ್ಗೆ 10.30ಕ್ಕೆ ತಮ್ಮ ಬಟ್ಟೆಗಳನ್ನು ಬದಿಯಲ್ಲಿ ಇಟ್ಟು ಹೊಳೆಗೆ ಇಳಿದರೆನ್ನಲಾಗಿದೆ. ಉಳಿದ ಮೂವರು ನೀರಿಗೆ ಇಳಿಯದೇ ದಡದಲ್ಲಿಯೇ ಇದ್ದರೆಂದು ತಿಳಿದುಬಂದಿದೆ.

ರಕ್ಷಿಸಲು ಹೋಗಿ ನೀರುಪಾಲು

ಇತ್ತೀಚೆಗೆ ಸುರಿದ ಮಳೆಯಿಂದ ಹೊಳೆಯ ಆಳ ತಿಳಿಯದ ಕಿರಣ್ ಈಜುತ್ತ ಮುಂದೆ ಮುಂದೆ ಸಾಗಿದರೆನ್ನಲಾಗಿದೆ. ಈ ವೇಳೆ ಕಿರಣ್ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿದನ್ನು ಸುದರ್ಶನ್ ಮತ್ತು ಸೋನೀಶ್ ಕಂಡರು. ಕಿರಣ್ ರಕ್ಷಿಸಲು ಹೊಳೆಯ ಮಧ್ಯ ಭಾಗಕ್ಕೆ ಹೋದರು. ಬಹಳಷ್ಟು ಆಳವಾಗಿದ್ದ ಹೊಳೆಯಲ್ಲಿ ಈ ಮೂವರು ಕೂಡ ಮುಳುಗಿದರು.

ದಡದ ಮೇಲೆ ಇದ್ದ ಮೂವರು ಸ್ನೇಹಿತರು ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿದರು. ಅಲ್ಲದೆ ಹೆಬ್ರಿ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದರು. ಮುಳುಗು ತಜ್ಞರುಗಳಾದ ಶಿವಪುರದ ವಿಜಯ್, ಸದಾನಂದ, ಕೃಷ್ಣಮೂರ್ತಿ ಹಾಗೂ ಚಾರಾದ ಕೆಂಚ ಎಂಬವರು ಹೊಳೆಯಲ್ಲಿ ಹುಡುಕಾಡಿದಾಗ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮೂವರ ಮೃತದೇಹಗಳು ಅಲ್ಲೇ ಸಮೀಪದ ಹೊಳೆಯಲ್ಲಿ ಪತ್ತೆಯಾದವು ಎಂದು ಮೂಲಗಳು ತಿಳಿಸಿವೆ.

ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಹೆಬ್ರಿ ಸರಕಾರಿ ಆಸ್ಪತ್ರೆಯಲ್ಲಿ ಮಾಡಲಾಯಿತು. ಸ್ಥಳಕ್ಕೆ ಹೆಬ್ರಿ ತಹಶೀಲ್ದಾರ್ ಪುರಂದರ ಕೆ., ಕಾರ್ಕಳ ವೃತ್ತ ನಿರೀಕ್ಷಕ ಸಂಪತ್ ಕುಮಾರ್, ಹೆಬ್ರಿ ಎಸ್ಸೈ ಮಹೇಶ್ ಆಗಮಿಸಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಹೆಬ್ರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿನ್ನೆಯೂ ಇದೇ ಸ್ಥಳಕ್ಕೆ ಬಂದಿದ್ದರು!

ಸರಿಯಾಗಿ ತರಗತಿಗೆ ಹಾಜರಾಗದ ಈ 12 ಮಂದಿ ವಿದ್ಯಾರ್ಥಿಗಳು ನಿನ್ನೆ ಕೂಡ ಇದೇ ಸ್ಥಳಕ್ಕೆ ಆಗಮಿಸಿದ್ದರು. ಇಲ್ಲಿನ ಶಿವಪುರ ಕೊರಗಜ್ಜ ದೇವಸ್ಥಾನದಲ್ಲಿ ಸಮಯ ಕಳೆದು ಬಳಿಕ ವಾಪಾಸ್ಸಾಗಿದ್ದರು.

ಮುಖ್ಯ ರಸ್ತೆಯಲ್ಲಿ ಬಸ್ಸಿನಿಂದ ಇಳಿದು ಸುಮಾರು ಎರಡು ಕಿ.ಮೀ. ದೂರದ ನಿರ್ಜನ ಪ್ರದೇಶದಲ್ಲಿರುವ ಈ ಹೊಳೆಯ ಬಳಿ ಇವರೆಲ್ಲ ನಡೆದುಕೊಂಡೆ ಹೋಗಿದ್ದರು. ಸ್ಥಳೀಯವಾಗಿ ಅಲ್ಲಿ ಯಾವುದೇ ಮನೆಗಳಿಲ್ಲ. ಈ 12 ಮಂದಿ ವಿದ್ಯಾರ್ಥಿಗಳು ಸರಿಯಾಗಿ ತರಗತಿಗಳಿಗೆ ಹಾಜರಾಗದ ಹಿನ್ನೆಲೆಯಲ್ಲಿ ಕಾಲೇಜಿನಿಂದ ಡೀಬಾರ್ ಆಗಿದ್ದರೆನ್ನಲಾಗಿದೆ. ಈ ವಿಚಾರ ಮನೆಯವರಿಗೆ ತಿಳಿದಿರ ಲಿಲ್ಲ. ಹಾಗಾಗಿ ಇವರು ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News