ದಿಲ್ಲಿಯ ನ್ಯಾಯಾಲಯಗಳಲ್ಲಿ ಶೇ.99ರಷ್ಟು ಪೊಕ್ಸೊ ಪ್ರಕರಣಗಳು ವಿಚಾರಣೆಗೆ ಬಾಕಿ: ವರದಿ

Update: 2021-11-26 14:03 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ನ.26: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕಳೆದ ವರ್ಷ ಮಕ್ಕಳ ವಿರುದ್ಧದ ಅಪರಾಧಗಳಲ್ಲಿ ಇಳಿಕೆ ಕಂಡು ಬಂದಿದೆಯಾದರೂ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿಯಿರುವ ಇಂತಹ ಪ್ರಕರಣಗಳ ಸಂಖ್ಯೆ ಸಾರ್ವಕಾಲಿಕ ಎತ್ತರವನ್ನು ತಲುಪಿದೆ. ಕೇವಲ ಶೇ.1ರಷ್ಟು ಪ್ರಕರಣಗಳಲ್ಲಿ ಮಾತ್ರ ತೀರ್ಪುಗಳು ಹೊರಬಿದ್ದಿವೆ ಎಂದು ಪ್ರಜಾ ಪ್ರತಿಷ್ಠಾನವು ತನ್ನ ವರದಿಯಲ್ಲಿ ತಿಳಿಸಿದೆ.

ಪ್ರತಿಷ್ಠಾನವು ಬಿಡುಗಡೆಗೊಳಿಸಿರುವ 2020 ಡಿಸೆಂಬರ್‌ವರೆಗಿನ ದತ್ತಾಂಶಗಳಂತೆ ನಗರದಲ್ಲಿ ಐಪಿಸಿ,ವಿಶೇಷ ಮತ್ತು ಸ್ಥಳೀಯ ಕಾನೂನುಗಳು, ಮಹಿಳೆಯರ ವಿರುದ್ಧ ಅಪರಾಧಗಳು ಮತ್ತು ಮಕ್ಕಳ ವಿರುದ್ಧ ಅಪರಾಧಗಳಡಿ ಭಾರೀ ಸಂಖ್ಯೆಯಲ್ಲಿ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. 2020ರಲ್ಲಿ ಮಕ್ಕಳ ವಿರುದ್ಧ ಅಪರಾಧಗಳ ಒಟ್ಟು 16,667 ಪ್ರಕರಣಗಳು ನ್ಯಾಯಾಲಯಗಳ ಮುಂದಿದ್ದು,ಈ ಪೈಕಿ ಶೇ.99ರಷ್ಟು ಪ್ರಕರಣಗಳಲ್ಲಿ ವಿಚಾರಣೆ ಬಾಕಿಯಿದೆ.

ಮಕ್ಕಳ ವಿರುದ್ಧದ ಹೇಯ ಅಪರಾಧಗಳು,ವಿಶೇಷವಾಗಿ ಪೊಕ್ಸೊ ಪ್ರಕರಣಗಳ ವಿಚಾರಣೆಗಾಗಿ ಮತ್ತು ಒಂದು ವರ್ಷದೊಳಗೆ ಅವುಗಳ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಆದಾಗ್ಯೂ ಶೇ.77ಕ್ಕೂ ಅಧಿಕ ಪೊಕ್ಸೊ ಪ್ರಕರಣಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಲು ದಿಲ್ಲಿಯ ನ್ಯಾಯಾಲಯಗಳು ಒಂದರಿಂದ ಮೂರು ವರ್ಷಗಳ ಸಮಯವನ್ನು ತೆಗೆದುಕೊಳ್ಳುತ್ತಿವೆ ಮತ್ತು ಶೇ.16ಕ್ಕೂ ಅಧಿಕ ಪ್ರಕರಣಗಳಲ್ಲಿ ತೀರ್ಪು ಹೊರಬರಲು ಐದು ವರ್ಷಗಳವರೆಗೆ ಸುದೀರ್ಘ ಸಮಯ ಕಾಯಬೇಕಿದೆ.

ಸಾಂಕ್ರಾಮಿಕದ ಸಂದರ್ಭದಲ್ಲಿ ಸ್ಥಾಪಿಸಲಾಗಿದ್ದ ವರ್ಚುವಲ್ ನ್ಯಾಯಾಲಯಗಳು ಮತ್ತು ಅಸಂಘಟಿತ ಪೊಲೀಸ್-ನ್ಯಾಯಾಲಯ ವ್ಯವಸ್ಥೆ ವಿಳಂಬಕ್ಕೆ ಕಾರಣವಾಗಿರಬಹುದು ಎನ್ನುವುದು ವಕೀಲರ ಅಭಿಪ್ರಾಯವಾಗಿದೆ. ದಿಲ್ಲಿ ಪೊಲೀಸ್‌ನ ಅಂಕಿಅಂಶಗಳಂತೆ 2019ರಲ್ಲಿ ಮಕ್ಕಳ ವಿರುದ್ಧದ ಅಪರಾಧಗಳ 1,719ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, 2020ರಲ್ಲಿ 1,197 ಪ್ರಕರಣಗಳು ದಾಖಲಾಗಿವೆ,ಅಂದರೆ ಶೇ.30ರಷ್ಟು ಇಳಿಕೆ ಕಂಡುಬಂದಿದೆ. ಆದಾಗ್ಯೂ ತನಿಖೆಯಲ್ಲಿ ಭಾರೀ ವಿಳಂಬವಾಗುತ್ತಿದೆ ಎನ್ನುವುದನ್ನು ಪ್ರಜಾ ಪ್ರತಿಷ್ಠಾನದ ದತ್ತಾಂಶಗಳು ತೋರಿಸಿವೆ.

ಅರ್ಧಕ್ಕೂ ಹೆಚ್ಚಿನ ಪೊಕ್ಸೊ ಪ್ರಕರಣಗಳಲ್ಲಿ ತನಿಖೆಯು ಪೂರ್ಣಗೊಳ್ಳಲು 90ರಿಂದ 120 ದಿನಗಳಿಗೂ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. 2020ರಲ್ಲಿ ದಾಖಲಾಗಿದ್ದ ಪ್ರಕರಣಗಳ ಪೈಕಿ ಶೇ.56ರಷ್ಟು ತನಿಖೆಗಾಗಿ ಕಾಯುತ್ತಿದ್ದರೆ,ಕೇವಲ ಶೇ.36ರಷ್ಟು ಪ್ರಕರಣಗಳಲ್ಲಿ ದೋಷಾರೋಪಣ ಪಟ್ಟಿಗಳು ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗಿವೆ ಎಂದು ಪ್ರತಿಷ್ಠಾನವು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News