×
Ad

ಮೈಸೂರಿನ ಫೋಟೊಗ್ರಾಫರ್ ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಪುತ್ತೂರಿನ ಜಯರಾಜ್ ಶೆಟ್ಟಿ ಸೆರೆ

Update: 2021-11-26 19:40 IST
ಜಯರಾಜ್ ಶೆಟ್ಟಿ

ಪುತ್ತೂರು : ಮೈಸೂರಿನ ಫೋಟೊಗ್ರಾಫರ್ ಜಗದೀಶ್ (58) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ಮತ್ತೋರ್ವ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಓರ್ವ ಮಹಿಳೆ ಸಹಿತ ನಾಲ್ವರನ್ನು ಬಂಧಿಸಲಾಗಿದೆ. ಈ ಪೈಕಿ ಮಹಿಳೆಯು ನ್ಯಾಯಾಂಗ ಬಂಧನದಲ್ಲಿದ್ದು, ಇತರ ಮೂವರು ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ಪುತ್ತೂರು ಬಡಗನ್ನೂರು ಗ್ರಾಮದ ಅಣಿಲೆ ಜಯರಾಜ್ ಶೆಟ್ಟಿ (48) ಎಂಬಾತನನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಒಳಸಂಚು ನಡೆಸಿದ್ದ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ.

ಬಂಧಿತ ಆರೋಪಿ ಜಯರಾಜ್ ಶೆಟ್ಟಿ ಕೆಲ ವರ್ಷಗಳ ಹಿಂದೆ ನಡೆದ ತಿಂಗಳಾಡಿ ಉಮೇಶ್ ರೈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿದ್ದ. ಮೈಸೂರು ಜಿಲ್ಲೆಯ ಸುಬ್ರಹ್ಮಣ್ಯ ನಗರ ನಿವಾಸಿ, ಮಂಗಳೂರಿನ ಕಾವೂರು ಗ್ರಾಮದ ಶಿವನಗರ ಮುಲ್ಲಕಾಡು ಸಿಂಧೂರ ಮನೆ ದಿ.ಶಂಭು ಶೆಟ್ಟಿಎಂಬವರ ಪುತ್ರ ಮಗ ಜಗದೀಶ್ (58) ಅವರನ್ನು ಕೊಲೆ ಮಾಡಿದ್ದ ಆರೋಪದಲ್ಲಿ ಈಗಾಗಲೇ ಮೃತ ಜಗದೀಶ್ ಅವರಿಗೆ ಸಂಬಂಧದಲ್ಲಿ ಮಾವ ಆಗಿರುವ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪಟ್ಲಡ್ಕ ಬಾಲಕೃಷ್ಣ ರೈ ಯಾನೆ ಸುಬ್ಬಯ್ಯ ರೈ, ಆತನ ಪತ್ನಿ ಜಯಲಕ್ಷ್ಮೀ ರೈ, ಮಗ ಪ್ರಶಾಂತ್ ರೈ ಮತ್ತು ಅವರ ನೆರೆಮನೆ ನಿವಾಸಿ ಜೀವನ್‍ ಪ್ರಸಾದ್ ಎಂಬವರನ್ನು ಪೊಲೀಸರು ಬಂಧಿಸಿದ್ದು, ಜಯಲಕ್ಷ್ಮೀ ರೈಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಉಳಿದ ಮೂವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳ ವಿಚಾರಣೆ ವೇಳೆ, ಕೃತ್ಯಕ್ಕೆ ಒಳಸಂಚು ರೂಪಿಸಿರುವುದು ಜಯರಾಜ್ ಶೆಟ್ಟಿ ಎಂಬ ಮಾಹಿತಿಯನ್ನು ಪಡೆದುಕೊಂಡಿರುವ ಪೊಲೀಸರು ಈತನನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News