ಬಂಜೆತನಕ್ಕೆ ಹೋಮಿಯೋಪತಿ ಚಿಕಿತ್ಸೆ ಪರಿಣಾಮಕಾರಿ: ಯೆನೆಪೋಯ ಸಂಸ್ಥೆ
ಮಂಗಳೂರು, ನ. 26: ಮಕ್ಕಳಿಲ್ಲದ ದಂಪತಿಗೆ ಹೋಮಿಯೋಪತಿ ಚಿಕಿತ್ಸೆ ಪರಿಣಾಮಕಾರಿಯಾಗಿದ್ದು, ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಹೋಮಿಯೋಪತಿ ಆಸ್ಪತ್ರೆಯಲ್ಲಿ ನೀಡಲಾದ ಚಿಕಿತ್ಸೆಯಿಂದ ಇಬ್ಬರು ದಂಪತಿಗೆ ಮಕ್ಕಳ ಭಾಗ್ಯ ಲಭ್ಯವಾಗಿದೆ ಎಂದು ಯೆನೆಪೋಯ ಹೋಮಿಯೋಪತಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮುಖ್ಯಸ್ಥರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಆಸ್ಪತ್ರೆಯ ಡೀನ್ ಹಾಗೂ ಹೋಮಿಯೋಪಥಿಕ್ ಫರ್ಟಿಲಿಟಿ ಕೇರ್ ಸೆಂಟರ್‌ನ ಯೋಜನಾ ನಿರ್ದೇಶಕರಾಗಿರುವ ಡಾ. ವಿವೇಕಾನಂದ ವಿ. ವರ್ಣೇಕರ, ಯೋನೆಪೋಯ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಮತ್ತು ಸರಕಾರಿ ಆಯುಷ್ ಇಲಾಖೆಯ ಸಹಭಾಗಿತ್ವದಲ್ಲಿ ಕರ್ನಾಟಕದಲ್ಲಿ ಆರಂಭಗೊಂಡ ಹೋಮಿಯೋಪಥಿಕ್ ಫರ್ಟಿಲಿಟಿ ಕೇರ್ ಬಂಜೆತನ ಸಮಸ್ಯೆಗೆ ಚಿಕಿತ್ಸೆ ನೀಡುವಲ್ಲಿ ಪರಿಣಾಮಕಾರಿ ಎಂಬುದನ್ನು ಸಾಬೀತು ಪಡಿಸಿದೆ ಎಂದರು.
ಈ ಕೇಂದ್ರದಲ್ಲಿ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ 47 ದಂಪತಿ ಸಂತಾನೋತ್ಪತ್ತಿಗಾಗಿ ಪರಿಹಾರ ಕೋರಿ ಬಂದಿದ್ದಾರೆ. ಕೋವಿಡ್ ಸಮಸ್ಯೆಯಿಂದ 15 ದಂಪತಿಗೆ ಮಾತ್ರ ಚಿಕಿತ್ಸೆ ಮುಂದುವರಿಸಲಾಗಿತ್ತು. 4 ದಂಪತಿಗೆ ಚಿಕಿತ್ಸೆ ಫಲಕಾರಿಯಾಗಿದ್ದು, ಈಗಾಗಲೇ 2 ಮಕ್ಕಳ ಜನನವಾಗಿದೆ. ಮೊದಲ ಮಗು 2020ರ ನವೆಂಬರ್ 28ರಂದು ಜನಿಸಿದ್ದು, 2021ರ ಅಕ್ಟೋಬರ್ 12ರಂದು ಇನ್ನೊಂದು ದಂಪತಿಗೆ ಮಗುವಿನ ಜನನವಾಗಿದೆ. ಎರಡೂ ಮಕ್ಕಳು ಆರೋಗ್ಯವಂತರಾಗಿದ್ದು, ಗರ್ಭಾವಸ್ಥೆಯ ಸಮಯದಲ್ಲಿ ಕೂಡಾ ಹೋಮಿಯೋಪಥಿಕ್ ಚಿಕಿತ್ಸೆ ಮುಂದುವರಿಸಲಾಗಿತ್ತು. ಹೋಮಿಯೋಪಥಿ ಉಪಚಾರ ಸರಳ, ಸುರಕ್ಷಿತ ಹಾಗೂ ಕಡಿಮೆ ವೆಚ್ಚದಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥರಾದ ಡಾ. ಕಿರಣ್ ಶ ಕಮ್ಮಾರ, ಆಯುಷ್ ಅಧಿಕಾರಿ ಡಾ. ಮುಹ್ಮಮದ್ ಇಕ್ಬಾಲ್, ಡಾ. ಬಿ.ವಿ. ಇಟಗಿ, ಅಬ್ದುಲ್ ರಝಾಕ್, ಡಾ. ಹೇಮವಾಣಿ ಹಾಗೂ ಅನ್ವರ್ ಉಪಸ್ಥಿತರಿದ್ದರು.