×
Ad

ಉಡುಪಿ: ತೆಗ್ಗರ್ಸೆಯಲ್ಲಿ ಅಪರೂಪದ ವೀರಗಲ್ಲು ಪತ್ತೆ

Update: 2021-11-26 19:45 IST

ಉಡುಪಿ, ನ.26: ಜಿಲ್ಲೆಯ ಬೈಂದೂರು ತಾಲೂಕಿನ ತೆಗ್ಗರ್ಸೆಯಲ್ಲಿ, ಮಣ್ಣಿನಲ್ಲಿ ಹೂತು ಹೋಗಿದ್ದ ವಿಜಯನಗರ ಕಾಲದ ಅಪರೂಪದ ವೀರಗಲ್ಲು ಒಂದನ್ನು ಶಿರ್ವದ ಎಂ.ಎಸ್.ಆರ್.ಎಸ್. ಕಾಲೇಜಿನ ಪುರಾತತ್ವ ವಿಭಾಗದ ವಿದ್ಯಾರ್ಥಿಗಳು ಪ್ರೊ.ಟಿ. ಮುರುಗೇಶಿ ಅವರ ಮಾರ್ಗದರ್ಶನ ಮತ್ತು ತೆಗ್ಗರ್ಸೆ ಟಿ. ನಾರಾಯಣ ಹೆಗ್ಡೆ ಕುಟುಂಬದ ಸಹಕಾರದೊಂದಿಗೆ ಹೊರ ತೆಗೆದು ಸಂಶೋಧಿಸಿದ್ದಾರೆ ಎಂದು ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ..ಟಿ.ಮುರುಗೇಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಮಾರು 5 ಅಡಿ ಎತ್ತರದ ಈ ವೀರಗಲ್ಲು ಆಯತಾಕಾರದಲ್ಲಿದ್ದು, ನಾಲ್ಕು ಚಿತ್ರಪಟ್ಟಿಕೆಗಳನ್ನು ಒಳಗೊಂಡಿದೆ. ಕೆಳಗಿನ ಪಟ್ಟಿಕೆಯಲ್ಲಿ ಇಬ್ಬರು ವೀರರು ಕೈಯಲ್ಲಿ ಖಡ್ಗ ಮತ್ತು ಗುರಾಣಿಗಳನ್ನು ಹಿಡಿದು ಪರಸ್ಪರ ಎದುರು ಬದುರಾಗಿ ನಿಂತಿದ್ದಾರೆ. ಅವರ ಹಿಂದೆ ಇಬ್ಬರು ಸೇವಕರು ನಿಂತಿರುವಂತೆ ಚಿತ್ರಿಸಲಾಗಿದೆ. ಮೇಲಿನ ಎರಡು ಪಟ್ಟಿಕೆಗಳಲ್ಲಿಯೂ ಇವೇ ಚಿತ್ರಗಳು ಪುನರಾವರ್ತನೆಯಾಗಿವೆ.

ಮೊದಲಿನ ಚಿತ್ರಪಟ್ಟಿಕೆಯಲ್ಲಿ ಮಧ್ಯದಲ್ಲಿ ಶಿವಲಿಂಗ ಎಡಬದಿಯಲ್ಲಿ ಕುಳಿತ ಭಂಗಿಯಲ್ಲಿರುವ ನಂದಿ ಮತ್ತು ಬಲಬದಿಯಲ್ಲಿ ಅಂಜಲಿಬದ್ಧನಾಗಿ ನಿಂತಿರುವ ವ್ಯಕ್ತಿಯ ಚಿತ್ರಣವಿದೆ. ಮೇಲಿನ ಪಟ್ಟಿಕೆಯ ಮೇಲ್ಭಾಗವನ್ನು ಕುದುರೆ ಲಾಳಾಕೃತಿ ಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಮಧ್ಯದಲ್ಲಿ ಸಿಂಹ ಲಾಂಛನವಿದೆ. ಪ್ರತಿ ಯೊಂದು ಚಿತ್ರಪಟ್ಟಿಕೆಯನ್ನು ಅಡ್ಡ ಪಟ್ಟಿಕೆಗಳ ಮೂಲಕ ಪ್ರತ್ಯೇಕಿಸಲಾಗಿದೆ. ಶಿವಲಿಂಗದ ಚಿತ್ರಪಟ್ಟಿಕೆಯ ಕೆಳಗಿನ ಅಡ್ಡ ಪಟ್ಟಿಯ ಮೇಲೆ ಎರಡು ಸಾಲಿನಲ್ಲಿ ಬರೆದ ಶಾಸನವಿದೆ. ಶಾಸನದಲ್ಲಿನ ಕೆಲವೇ ಕೆಲವು ಅಕ್ಷರಗಳನ್ನು ಗುರುತಿಸಲು ಸಾದ್ಯವಾಗಿದೆ. ಅ, ಸ, ಗ, ತ, ಅಕ್ಷರಗಳು ಸ್ಪಷ್ಟವಾಗಿ ವಿಜಯ ನಗರದ ಶೈಲಿಯಲ್ಲಿವೆ. ಆದ್ದರಿಂದ ಈ ಶಾಸನವನ್ನು ವಿಜಯನಗರ ಕಾಲದ ಶಾಸನವೆಂದು ನಿರ್ಧರಿಸಬಹುದಾಗಿದೆ.

ವೀರಗಲ್ಲಿನ ಮಹತ್ವ: ವೀರಗಲ್ಲಿನ ನಾಲ್ಕು ಚಿತ್ರಪಟ್ಟಿಕೆಗಳಲ್ಲಿ ಮರಣ ಹೊಂದಿದ ವೀರನ ತಲೆ ದಿರಿಸು ಮತ್ತು ಮುಖದ ಭಾವಗಳನ್ನು ಒಂದೇ ರೀತಿಯಲ್ಲಿ ಬಲಭಾಗದಲ್ಲಿ ಚಿತ್ರಿಸಲಾಗಿದೆ. ಆದರೆ, ಎಡಭಾಗದಲ್ಲಿರುವ ವೀರರ ತಲೆದಿರಿಸು ಮತ್ತು ಮುಖಭಾವಗಳು ಮೂರು ಚಿತ್ರಪಟ್ಟಿಕೆಗಳಲ್ಲಿ ಭಿನ್ನ ಭಿನ್ನವಾಗಿವೆ. ಇದರಿಂದ, ಮರಣ ಹೊಂದಿದ ವೀರ, ಮೂವರು ಬೇರೆ ಬೇರೆ ವ್ಯಕ್ತಿಗಳೊಂದಿಗೆ ಖಡ್ಗ ಯುದ್ದದಲ್ಲಿ ಸೆಣೆಸಿ ಮರಣ ಹೊಂದಿದ್ದಾನೆ ಎನ್ನುವುದು ಸ್ಫಷ್ಟವಾಗುತ್ತದೆ. ಆದ್ದರಿಂದ ಈ ವೀರಗಲ್ಲು ಎರಡು ಸೇನೆಗಳ ನಡುವೆ ನಡೆದ ಯುದ್ಧವಲ್ಲ, ‘ಖಡ್ಗ ಯುದ್ಧದ ಸ್ಪರ್ಧೆ’ಯಲ್ಲಿ ಮಡಿದ ವೀರನ ಸ್ಮಾರಕ ಶಾಸನ ಎಂದು ಸ್ಪಷ್ಟವಾಗುತ್ತದೆ.

ಈ ಶಾಸನ ತೆಗ್ಗರ್ಸೆ ಕಂಬಳ ಗದ್ದೆಯ ಅಂಚಿನಲ್ಲಿ ತೆಗ್ಗರ್ಸೆ ಟಿ. ನಾರಾಯಣ ಹೆಗ್ಡೆಯವರ ಕಂಠದ ಮನೆಯ ಪಕ್ಕದಲ್ಲಿದೆ. ತೆಗ್ಗರ್ಸೆಯ ಕಂಬಳ ಆ ಭಾಗದ ಪ್ರಸಿದ್ಧ ವಾರ್ಷಿಕ ಕ್ರೀಡೆಯಾಗಿದ್ದು ಹೆಗ್ಡೆ ಕುಟುಂಬದವರು ಅದನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ. ಈ ಬಾರಿಯ ಕಂಬಳದ ಹೊತ್ತಿಗೆ ಈ ಶಾಸನವನ್ನು ಸುರಕ್ಷಿತವಾಗಿ ಸಂರಕ್ಷಿಸಲಾಗುವುದು ಎಂದು ಹೆಗ್ಡೆ ತಿಳಿಸಿದ್ದಾರೆ. ಟಿ.ನಾರಾಯಣ ಹೆಗ್ಡೆ ಕುಟುಂಬದ ಸಹಕಾರದಿಂದ ಈ ಶಾಸನಾಧ್ಯಯನ ಸಾಧ್ಯವಾಗಿದೆ ಎಂದು ಪ್ರೊ.ಮುರುಗೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News