ಪ್ರಕರಣಗಳ ವಿಚಾರಣೆಗೆ ಕಾಲಮಿತಿ ನಿಗದಿ ಉಪಕ್ರಮಕ್ಕೆ ಇದು ಸಕಾಲ: ಸುಪ್ರೀಂ ಕೋರ್ಟ್

Update: 2021-11-26 14:29 GMT

ಹೊಸದಿಲ್ಲಿ,ನ.26: ಅತ್ಯಂತ ಸೀಮಿತ ಸಮಯ ಲಭ್ಯವಿರುವುದರಿಂದ ಮತ್ತು ಒಂದೇ ಪ್ರಕರಣದಲ್ಲಿ ಅವೇ ಅಂಶಗಳ ಬಗ್ಗೆ ವಾದಿಸಲು ವಕೀಲರು ಬಯಸುವುದರಿಂದ ಪ್ರಕರಣಗಳ ವಿಚಾರಣೆಗೆ ಕಾಲಮಿತಿಯನ್ನು ನಿಗದಿಗೊಳಿಸಲು ಉಪಕ್ರಮ ಕೈಗೊಳ್ಳಲು ಈಗ ಸಕಾಲವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಹೇಳಿದೆ.

ನ್ಯಾ.ಎಂ.ಎನ್.ವೆಂಕಟಾಚಲಯ್ಯ ಅವರು ಭಾರತದ ಮುಖ್ಯ ನ್ಯಾಯಾಧೀಶರಾಗಿದ್ದಾಗ(1993-94ರಲ್ಲಿ) ಪ್ರಕರಣಗಳ ವಿಚಾರಣೆಗಾಗಿ ಕಾಲಮಿತಿಯನ್ನು ನಿಗದಿಗೊಳಿಸುವ ಬಗ್ಗೆ ಸಲಹೆ ನೀಡಿದ್ದರು ಎಂದು ಹೇಳಿದ ನ್ಯಾಯಮೂರ್ತಿಗಳಾದ ಎ.ಎಂ ಖನ್ವಿಲ್ಕರ್ ಮತ್ತು ಸಿ.ಟಿ.ರವಿಕುಮಾರ್ ಅವರ ಪೀಠವು,‘ನಾವು ಈಗ ಅದರ ಬಗ್ಗೆ ಗಂಭೀರವಾಗಿ ಯೋಚಿಸುವ ಅಗತ್ಯವಿದೆ. ಈ ಬಗ್ಗೆ ಚಿಂತನೆ ಬಹಳ ಸಮಯದಿಂದ ನಡೆಯುತ್ತಿದೆಯಾದರೂ ನಾವದನ್ನು ಅನುಷ್ಠಾನಿಸಿಲ್ಲ’ ಎಂದು ಹೇಳಿತು.

ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ.ಬಂಗಾಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಯಾಸ್ ಚಂಡಮಾರುತದ ಪರಿಣಾಮಗಳ ಬಗ್ಗೆ ಚರ್ಚಿಸಲು ಕಲೈಕುಂದಾ ವಾಯುನೆಲೆಯಲ್ಲಿ ಮೋದಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಗೆ ಆಗ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದ ಆಲಾಪನ್ ಬಂಡೋಪಾಧ್ಯಾಯ ಗೈರುಹಾಜರಾಗಿದ್ದರು. ಇದಕ್ಕಾಗಿ ಕೇಂದ್ರ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯವು ಅವರ ವಿರುದ್ಧ ಶಿಸ್ತುಕ್ರಮಗಳನ್ನು ಆರಂಭಿಸಿತ್ತು. ಇದನ್ನು ಪ್ರಶ್ನಿಸಿ ಬಂಡೋಪಾಧ್ಯಾಯ ಅವರು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ)ಯ ಕೋಲ್ಕತಾ ಪೀಠಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು.

ಈ ಅರ್ಜಿಯನ್ನು ಕೋಲ್ಕತಾದಿಂದ ದಿಲ್ಲಿಗೆ ವರ್ಗಾಯಿಸಿದ್ದ ಸಿಎಟಿಯ ಪ್ರಧಾನ ಪೀಠದ ಆದೇಶವನ್ನು ರದ್ದುಗೊಳಿಸಿದ್ದ ಕೋಲ್ಕತಾ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರಕಾರವು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಪ್ರಕರಣಗಳ ವಿಚಾರಣೆಗೆ ಕಾಲಮಿತಿಯನ್ನು ನಿಗದಿಗೊಳಿಸಲು ಉಪಕ್ರಮವನ್ನು ತೆಗೆದುಕೊಳ್ಳಿ,ಅದಕ್ಕೆ ಇದು ಸಕಾಲವಾಗಿದೆ ಎಂದು ಪೀಠವು ಸರಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರಿಗೆ ಸೂಚಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ,‘ಉಪಕ್ರಮವನ್ನು ನ್ಯಾಯಾಲಯವು ತೆಗೆದುಕೊಳ್ಳಬಹುದು,ನಾವು ಕೇವಲ ಬೆಂಬಲಿಸಬಹುದಾಗಿದೆ ’ ಎಂದು ತಿಳಿಸಿದರು.

ಪ್ರಕರಣದ ಮುಂದಿನ ವಿಚಾರಣೆ ನ.29ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News