ಅಸ್ಪೃಶ್ಯತೆ ನಿವಾರಣೆಗೆ ಸರಕಾರದಿಂದ ವಿಶೇಷ ಕಾರ್ಯಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2021-11-26 14:36 GMT

ಉಡುಪಿ,  ನ.26: ಸಮಾಜದಲ್ಲಿ ಆಳವಾಗಿ ಬೇರೂರಿರುವ ಅಸ್ಪೃಶ್ಯತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಚುನಾವಣೆ ಮುಗಿದ ಬಳಿಕ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಸರಕಾರದ ಮುಂದೆ ಇದೆ. ಪ್ರತಿ ಮನೆ ಹಾಗೂ ವ್ಯಕ್ತಿಯನ್ನು ಅಸ್ಪೃಶ್ಯತೆ ನಿವಾರಣೆಗೆ ಸಜ್ಜುಗೊಳಿಸಬೇಕೆಂಬ ಯೋಚನೆ ನಮ್ಮ ದಾಗಿದೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಇಲಾಖೆಯಿಂದ ಮಾಡುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಪೇಜಾವರ ಸ್ವಾಮೀಜಿಯನ್ನು ಕೂಡ ಆಹ್ವಾನಿಸಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಸಂವಿಧಾನ ದಿನಾಚರಣೆ ಪ್ರಯುಕ್ತ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ರಜತಾದ್ರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಶುಕ್ರವಾರ ಮಾಲಾ ರ್ಪಣೆಗೈದ ಅವರು ಬಳಿಕ ಮಾಧ್ಯವುದವರೊಂದಿಗೆ ಮಾತನಾಡುತಿದ್ದರು.

ರಾಜ್ಯದಲ್ಲಿ 2400ಕ್ಕೂ ಹೆಚ್ಚು ಬಿಸಿಎಂ ಹಾಸ್ಟೆಲ್‌ಗಳಿವೆ. ಅದಕ್ಕೆ ವಾರ್ಡನ್ ಗಳ ಕೊರತೆ ಆದಾಗ ಮರುಹೊಂದಾಣಿಕೆ ಮಾಡುವ ಕೆಲಸ ಮಾಡಿದ್ದೇವೆ. ಹೊರಗುತ್ತಿಗೆ ಆಧಾರದಲ್ಲಿ ವಾರ್ಡನ್‌ಗಳನ್ನು ನೇಮಿಸಿಕೊಳ್ಳಬಹುದು ಎಂದು ನಾನು ತಿಳಿದುಕೊಂಡಿದ್ದೇನೆ. ಆ ನಿಯಮಗಳಿಗೆ ಅನುಗುಣವಾಗಿ ಸದ್ಯಕ್ಕೆ ಖಾಲಿ ಇರುವ ಕಡೆಗಳಲ್ಲಿ ವಾರ್ಡನ್‌ಗಳನ್ನು ನೇಮಕ ಮಾಡಲಾಗುವುದು ಎಂದರು.

ಸಂವಿಧಾನ ಮರು ಓದು ಕಾರ್ಯಕ್ರಮ ನಡೆಸಲು ಸರಕಾರ ಮಟ್ಟದಲ್ಲಿ ಯೋಚನೆ ಮಾಡುತ್ತಿದ್ದೇವೆ. ನೀತಿ ಸಂಹಿತೆ ಸಂದರ್ಭದಲ್ಲಿ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಇಂದು ಸಾಂಕೇತಿಕವಾಗಿ ಆಚರಣೆ ಮಾಡುತ್ತಿದ್ದೇವೆ. ಅಂಬೇಡ್ಕರ್ ವಿಚಾರಧಾರೆ ಸೇರಿ ದಂತೆ ಅವರ ಯೋಚನೆ, ಯೋಜನೆ ಅನುಷ್ಠಾನಕ್ಕೆ ಬಹುದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಇಡೀ ಜಗತ್ತಿನಲ್ಲಿ ಅತ್ಯಂತ ಸರ್ವ ಶ್ರೇಷ್ಠ ಗ್ರಂಥಗಳಲ್ಲಿ ಒಂದಾದ ಭಾರತದ ಸಂವಿಧಾನದಡಿಯಲ್ಲಿ ಇಡೀ ದೇಶ ಒಂದಾಗಿ ಸಾಗುತ್ತಿದೆ. ಆದುದರಿಂದ ಸಂವಿಧಾನ ಅಂಗೀಕೃತವಾದ ದಿನವನ್ನು ಎಲ್ಲರು ಸಂಭ್ರಮದಿಂದ ಆಚರಿಸುತ್ತಿ ದ್ದೇವೆ. ಈ ಸಂವಿಧಾನ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕೊಡಲು ಅವಕಾಶ ಕಲ್ಪಿಸಿದೆ ಎಂದು ಸಚಿವರು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಪಂ ಮಾಜಿ ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಕಾಪು ಅಧ್ಯಕ್ಷ ಶ್ರೀಕಾಂತ್ ನಾಯಕ್, ಅಚ್ಚುತ ಕಲ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.

ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಟಿಕೆಟ್ 

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ದಲಿತರು ಅಲ್ಪ ಸಂಖ್ಯಾತರಿಗೆ ಟಿಕೆಟ್ ನೀಡಿಲ್ಲ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಅನುಗಣವಾಗಿ ಟಿಕೆಟ್ ಕೊಡಲಾಗಿದೆ. ನಾನು ಕೂಡ ಹಿಂದುಳಿದ ವರ್ಗದ ವ್ಯಕ್ತಿಯಾಗಿದ್ದೇನೆ ಹಾಗೂ ಸಮಾಜ ಕಲ್ಯಾಣ ಸಚಿವನಾಗಿದ್ದೇನೆ. ನನ್ನನ್ನು ಸೇರಿದಂತೆ ಅನೇಕ ಹಿಂದುಳಿದ ವರ್ಗದವರಿಗೆ ಮತ್ತು ದಲಿತರಿಗೂ ಟಿಕೆಟ್ ಸಿಕ್ಕಿಬರಬಹುದು. ನಾನು ಪೂರ್ಣ ಪಟ್ಟಿಯನ್ನು ಸರಿಯಾಗಿ ನೋಡಿಲ್ಲ. ಧ್ರುವ ನಾರಾಯಣ ಏಕಪಕ್ಷೀಯವಾಗಿ ಮಾತನಾಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದರು.

ಕಾಂಗ್ರೆಸ್‌ನವರು ಹೆಮ್ಮೆ ಪಡುವ ಹಾಗೂ ಕಾಂಗ್ರೆಸ್‌ನ ಸರ್ವೋಚ್ಛ ನಾಯಕ ನೆಹರು, ಆರ್‌ಎಸ್‌ಎಸ್ ಒಂದು ರಾಷ್ಟ್ರ ಪ್ರೇಮಿ ಸಂಘಟನೆ, ಅದನ್ನು ಅರ್ಥ ಮಾಡಿಕೊಂಡು ಗಣರಾಜ್ಯೋತ್ಸವದ ಪಥಸಂಚಲನಕ್ಕೆ ಆರ್‌ಎಸ್‌ಎಸ್‌ಗೆ ಅವಕಾಶ ಮಾಡಿಕೊಟ್ಟಿ ದ್ದೇನೆ ಎಂದು ಹೇಳಿದ್ದರು. ಈಗ ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡುವ ಕಾಂಗ್ರೆಸ್ ನಾಯಕರು, ನೆಹರು ಅವರಿಗೆ ಮೀರಿದವರಾದರೆ ಅವರ ಮಾತಿಗೆ ಉತ್ತರ ಕೊಡುವುದಿಲ್ಲ ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News